ಅಬುದಾಬಿ: ಯುಎಇಯಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ 37ನೇ ಪಂದ್ಯದಲ್ಲಿ ಭಾರತ ಮತ್ತು ಸ್ಕಾಟ್ಲೆಂಡ್ ತಂಡಗಳು ಇಂದು ( ನವೆಂಬರ್ 5 ) ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮುಖಾಮುಖಿಯಾದವು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಸ್ಕಾಟ್ಲೆಂಡ್ ವಿರುದ್ಧ 8 ವಿಕೆಟ್‍ಗಳ ಅಮೋಘ ಗೆಲುವನ್ನು ಸಾಧಿಸುವುದರ ಮೂಲಕ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ತನ್ನ ದ್ವಿತೀಯ ಗೆಲುವನ್ನು ದಾಖಲಿಸಿತು.
ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬೌಲಿಂಗ್ ಆಯ್ಕೆ ಮಾಡಿಕೊಂಡು ಎದುರಾಳಿ ತಂಡವಾದ ಸ್ಕಾಟ್ಲೆಂಡ್‌ಗೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶವನ್ನು ನೀಡಿದರು. ಹೀಗೆ ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಸ್ಕಾಟ್ಲೆಂಡ್ ಬ್ಯಾಟ್ಸ್‌ಮನ್‌ಗಳು ಟೀಮ್ ಇಂಡಿಯಾ ಬೌಲರ್‌ಗಳ ದಾಳಿಗೆ ತತ್ತರಿಸಿ ಪೆವಿಲಿಯನ್ ಪರೇಡ್ ನಡೆಸಿದರು. 17.4 ಓವರ್‌ಗಳಲ್ಲಿ 85 ರನ್‌ಗಳಿಗೆ ಆಲ್ ಔಟ್ ಆದ ಸ್ಕಾಟ್ಲೆಂಡ್ ಟೀಮ್ ಇಂಡಿಯಾಗೆ ಗೆಲ್ಲಲು 86 ರನ್‌ಗಳ ಅಲ್ಪ ಮೊತ್ತದ ಗುರಿಯನ್ನು ನೀಡಿತು.
ಇನ್ನು ಸ್ಕಾಟ್ಲೆಂಡ್ ತಂಡ ನೀಡಿದ 86 ರನ್‌ಗಳ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾದ ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ಕೆಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ ಪ್ರಾರಂಭದಿಂದಲೂ ಅಬ್ಬರದ ಬ್ಯಾಟಿಂಗ್ ನಡೆಸಿದರು. ರೋಹಿತ್ ಶರ್ಮಾ 16 ಎಸೆತಗಳಲ್ಲಿ 30 ರನ್ ಗಳಿಸಿದರು ಮತ್ತು ಕೆಎಲ್ ರಾಹುಲ್ 19 ಎಸೆತಗಳಲ್ಲಿ 50 ರನ್ ಬಾರಿಸಿದರು. ಇನ್ನುಳಿದಂತೆ ವಿರಾಟ್ ಕೊಹ್ಲಿ ಅಜೇಯ 2 ರನ್ ಮತ್ತು ಸೂರ್ಯಕುಮಾರ್ ಯಾದವ್ ಅಜೇಯ 6 ರನ್ ಕಲೆ ಹಾಕಿದರು. ಈ ಮೂಲಕ ಟೀಮ್ ಇಂಡಿಯಾ 6.3 ಓವರ್‌ಗಳಲ್ಲಿ 89 ರನ್ ಬಾರಿಸುವ ಮೂಲಕ 8 ವಿಕೆಟ್‍ಗಳ ಬೃಹತ್ ಗೆಲುವನ್ನು ದಾಖಲಿಸಿದೆ. ಹಾಗೂ ಅಂಕಪಟ್ಟಿಯಲ್ಲಿ ತೃತೀಯ ಸ್ಥಾನಕ್ಕೇರಿದೆ.