Ad Widget .

‘ಬಲಿ ಚಕ್ರವರ್ತಿ’ ಬಂದ ದಾರಿ ಬಿಡಿ|

ಸಮಗ್ರ ವರದಿ: ಅಂಧಕಾರವನ್ನು ಕಳೆಯುವ ಕಾರ್ತಿಕ ಮಾಸ ಆರಂಭವಾಗುವುದೇ ಪಾಡ್ಯದಂದು ಬೆಳಗುವ ದೀಪದ ಬೆಳಕಿನಿಂದ. ಕರ್ನಾಟಕದಲ್ಲಿ ದೀಪಾವಳಿಯನ್ನು ಸಾಮಾನ್ಯವಾಗಿ ಮೂರು ದಿನ ಆಚರಿಸುತ್ತಾರೆ, ನರಕಚತುರ್ದಶಿ, ಅಮಾವಾಸ್ಯೆ ಹಾಗೂ ಮೂರನೇ ದಿನವೇ ಬಲಿಪಾಡ್ಯಮಿ, ಈ ಬಲಿಪಾಡ್ಯಮಿಯಿಂದ ಆರಂಭಗೊಳ್ಳುವ ಕಾರ್ತಿಕ ಮಾಸ ಲಕ್ಷದೀಪೋತ್ಸವ ಕೊನೆಗೊಳ್ಳುವವರೆಗೂ ಬೆಳಗುವಂತಹ ಮಾಸವಾಗಿದೆ.

Ad Widget . Ad Widget .

ದೀಪಾವಳಿಯ ಮೂರನೆಯ ದಿನ ಆಚರಿಸುವ ಹಬ್ಬವಾದ ಬಲಿ ಪಾಡ್ಯಮಿಯಂದು ದಾನವ ಅರಸನಾದ ಬಲೀಂದ್ರನ ಪೂಜೆಯನ್ನು ಮಾಡುತ್ತಾರೆ. ಹಾಗಾಗಿ ಈ ದಿನವನ್ನು ಬಲಿಪಾಡ್ಯಮಿ ಎಂದೇ ಕರೆಯುತ್ತಾರೆ. ಹಿರಣ್ಯ ಕಶ್ಯಪುವಿನ ವಂಶಸ್ಥನಾದ ಇವನು ದಾನವನಾದರೂ ಈ ದಿನ ಬಲೀಂದ್ರನನ್ನು ಭಕ್ತಿ ಶ್ರದ್ಧೆಯಿಂದ ಆಚರಿಸುತ್ತಾರೆ.

Ad Widget . Ad Widget .

ಪುರಾಣ ಕಥೆ
ನರಸಿಂಹನ ಅವತಾರದಲ್ಲಿ ಶ್ರೀವಿಷ್ಣುವಿನಿಂದ ಹತನಾದ ಹಿರಣ್ಯಕಶಿಪುವಿನ ಪುತ್ರ ಪ್ರಹ್ಲಾದನ ಮೊಮ್ಮಗ ಮಹಾಬಲಿ, ಅಸುರ ಕುಲದಲ್ಲಿ ಹುಟ್ಟಿದ ವಿಷ್ಣುಭಕ್ತ ಪ್ರಹ್ಲಾದನಂತೆಯೇ ಮಹಾಬಲಿಯೂ ಕೂಡಾ ವಿಷ್ಣುಭಕ್ತನೇ. ದೇವಾನುದೇವತೆಗಳನ್ನು ಸೋಲಿಸಿ ಮೂರೂ ಲೋಕಗಳನ್ನು ಆಳತೊಡಗುತ್ತಾನೆ. ಆ ಸಂದರ್ಭದಲ್ಲಿ ದೇವತೆಗಳು ಮಹಾವಿಷ್ಣುವಿನ ಮೊರೆಹೋಗುತ್ತಾರೆ. ಆ ಸಂದರ್ಭದಲ್ಲಿ ಮಹಾವಿಷ್ಣುವು ಮಹಾಬಲಿ ಚಕ್ರವರ್ತಿಯು ತನ್ನ ಪ್ರಜೆಗಳಿಗೆಲ್ಲರಿಗೂ ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದಾನೆ, ಆತನು ಸುರನಾಗಲು ಎಲ್ಲಾ ಅರ್ಹತೆಗಳನ್ನು ಪಡೆಯುತ್ತಾನೆ ಎಂದು ತಿಳಿಸುತ್ತಾನೆ.

ಮೂರೂ ಲೋಕಗಳನ್ನು ಜಯಿಸಿದ ಮಹಾಬಲಿಯು ಮಹಾಯಾಗವೊಂದನ್ನು ಮಾಡುತ್ತಾನೆ, ಯಾಗದಲ್ಲಿ ಕೇಳಿದ ವಸ್ತುಗಳೆಲ್ಲವನ್ನೂ ಬಂದವರಿಗೆ ದಾನ ಮಾಡುತ್ತಾನೆ. ಆ ಸಂದರ್ಭದಲ್ಲಿ ಮಹಾವಿಷ್ಣುವು ಮಹಾಬಲಿಯ ಭಕ್ತಿಯನ್ನು ಪರೀಕ್ಷಿಸಲು ಪುಟ್ಟ ಬಾಲಕ ವಾಮನನ ಅವತಾರದಲ್ಲಿ ಬಲಿ ಚಕ್ರವರ್ತಿಯ ಯಾಗಕ್ಕೆ ಬರುತ್ತಾನೆ. ಚಕ್ರವರ್ತಿಯು ಬಾಲಕ ವಾಮನನಿಗೆ ನೀನು ಕೇಳಿದ್ದೆಲ್ಲವನ್ನೂ ಕೊಡುತ್ತೇನೆ, ನಿನಗೇನು ಬೇಕು ಎಂದು ಕೇಳಿದಾಗ, ಬಾಲಕ ವಾಮನನು ನನಗೆ ಮೂರು ಹೆಜ್ಜೆ ಜಾಗವನ್ನು ನೀಡು ಎಂದು ಕೇಳುತ್ತಾನೆ.

ಬಲಿ ಚಕ್ರವರ್ತಿಯು ಬಾಲಕನ ಆಸೆಯಂತೆ ಮೂರು ಹೆಜ್ಜೆಗಳನ್ನಿಡಲು ಒಪ್ಪುತ್ತಾನೆ.ಆಗ ಬಂದಿರುವುದು ಮಹಾವಿಷ್ಣುವೆಂದು ತಿಳಿದ ಶುಕ್ರಾಚಾರ್ಯರು ದಾನವನ್ನು ಜಲಸಾಕ್ಷಿಯಾಗಿ ನೀಡುವುದರಿಂದ ಬಲೀಂದ್ರನ ಕಮಂಡಲದೊಳಗೆ ಕಪ್ಪೆಯ ರೂಪದಲ್ಲಿ ಸೇರಿ, ನೀರು ಹೊರಬರದಂತೆ ಅಡ್ಡವಾದರು. ಆಗ ಬಾಲಕ ವಾಮನನು ದರ್ಭೆಯಿಂದ ಕಮಂಡಲದಿಂದ ನೀರು ಬರುವ ಕಡೆ ತಿವಿದಾಗ, ಶುಕ್ರಾಚಾರ್ಯರ ಕಣ್ಣಿಗೆ ಚುಚ್ಚಿ, ಅವರು ಒಂದು ಕಣ್ಣನ್ನು ಕಳೆದುಕೊಂಡರು.

ವಾಮನನ ರೂಪದಲ್ಲಿರುವ ಮಹಾವಿಷ್ಣುವು ಸ್ವರ್ಗಲೋಕಗಳನ್ನು ಮೀರಿ ಎತ್ತರಕ್ಕೆ ಬೆಳೆಯುತ್ತಾನೆ. ಮೊದಲ ಹೆಜ್ಜೆಯಿಂದ ಭೂಮಿಯನ್ನು ಅಳೆದು ತೆಗೆದುಕೊಳ್ಳುತ್ತಾನೆ. ಎರಡನೇ ಹೆಜ್ಜೆಯಿಂದ ಸ್ವರ್ಗವನ್ನು ಅಳೆದು ಪಡೆಯುತ್ತಾನೆ, ಮೂರನೇ ಹೆಜ್ಜೆ ಇಡಲು ಮಹಾಬಲಿಯು ಜಾಗವನ್ನು ಕೊಡಬೇಕಾದಾಗ ಚಕ್ರವರ್ತಿಯು, ಉಳಿದೊಂದು ಹೆಜ್ಜೆಯನ್ನು ತನ್ನ ಶಿರದ ಮೇಲಿಡುವಂತೆ ವಾಮನನನ್ನು ಬೇಡಿಕೊಳ್ಳುತ್ತಾನೆ

ಮೂರನೇ ಹೆಜ್ಜೆಯನ್ನು ಬಲಿಚಕ್ರವರ್ತಿಯ ಶಿರದ ಮೇಲಿಡುತ್ತಿದ್ದಂತೆ, ಬಲಿ ಚಕ್ರವರ್ತಿಯು ಪಾತಾಳಕ್ಕೆ ತಳ್ಳಲ್ಪಡುತ್ತಾನೆ. ಬಲಿಚಕ್ರವರ್ತಿಯ ಭಕ್ತಿ ಮತ್ತು ನಿಷ್ಠೆಗೆ ಮೆಚ್ಚಿದ ಮಹಾವಿಷ್ಣುವು ಪಾತಾಳವನ್ನು ಆಳುವಂತೆ ಆಶೀರ್ವದಿಸುತ್ತಾನೆ. ವಿಷ್ಣುಭಕ್ತನಾದ ಬಲೀಂದ್ರನಿಗೆ ಆಶ್ವಯುಜ ಮಾಸದಲ್ಲಿ ಭೂಮಿಗೆ ಬಂದು ಪೂಜೆ ಸ್ವೀಕರಿಸುವ ವರವನ್ನು ನೀಡಿದ. ಹಾಗಾಗಿ ಮೂರು ದಿನಗಳ ದೀಪಾವಳಿ ಆಚರಣೆಯಲ್ಲಿ ಮೂರನೇ ದಿನ ಬಲೀಂದ್ರನಿಗೆ ಪೂಜೆಯನ್ನು ನಡೆಸಲಾಗುತ್ತದೆ.

ಬಲಿಚಕ್ರವರ್ತಿಯು ತುಳುನಾಡನ್ನು ಆಳಿದ್ದ ಚಕ್ರವರ್ತಿ ಎಂಬುವುದು ತುಳುವರ ನಂಬಿಕೆ. ವರ್ಷಕ್ಕೊಮ್ಮೆ ಬರುವ ಬಲಿಯನ್ನು ಕರೆಯುವ ಆಚರಣೆಯೇ ‘ಬಲೀಂದ್ರ ಲೆಪ್ಪು’. ಕತ್ತಲಾಗುತ್ತಿದ್ದಂತೆ ಅಂಗಳದ ಸುತ್ತಲೂ ತೆಂಗಿನ ಗರಟೆಗೆ ಎಣ್ಣೆ ಹಾಕಿ ದೀಪವನ್ನು ಬೆಳಗಲಾಗುತ್ತದೆ. ಮನೆಯ ಗಂಡಸರು ಗದ್ದೆಯ ಬದಿ ಬಿದಿರಿನ ಕೋಲಿಗೆ ಬಟ್ಟೆಯನ್ನು ಸುತ್ತಿ, ಎಣ್ಣೆಯನ್ನು ಹಚ್ಚಿದ ದೊಂದಿಯನ್ನು ಉರಿಸುತ್ತಾರೆ. ನಂತರ ಬಲೆಕಿ ಮರದ ಅಡಿಯಲ್ಲಿ ಗೆರಸೆಯಲ್ಲಿ ತೆಂಗಿನಕಾಯಿ, ಅವಲಕ್ಕಿ, ಗಟ್ಟಿ ಹಾಕಿ ಬಲೀಂದ್ರ ಕೂ.. ಕೂ..ಕೂ ಎಂದು ಮೂರು ಬಾರಿ ಬಲೀಂದ್ರನನ್ನು ಕರೆಯುತ್ತಾರೆ. ನಂತರ ಗೋವಿನ ಹಟ್ಟಿಗೆ ತೆರಳಿ ಗೋವಿಗೆ, ಬೇಸಾಯಕ್ಕೆ ಬಳಸುವ ಪರಿಕರಗಳಿಗೆ ಪೂಜೆಯನ್ನು ಮಾಡುತ್ತಾರೆ. ಗೋವಿಗೆ ಅಕ್ಕಿಯಲ್ಲಿ ತಯಾರಿಸಿದ ದೋಸೆ ಅಥವಾ ಗಟ್ಟಿಯನ್ನು ನೀಡಲಾಗುತ್ತದೆ.

ಪ್ರಾದೇಶಿಕತೆಗೆ ತಕ್ಕಂತೆ ದೀಪಾವಳಿಯ ಆಚರಣೆಗಳು ವಿಭಿನ್ನವಾಗಿ ನಡೆದರೂ, ದೀಪಾವಳಿಯ ಉದ್ದೇಶ ಮಾತ್ರ ಒಂದೇ. ಕತ್ತಲಿನಿಂದ ಬೆಳಕಿನೆಡೆಗೆ ಎನ್ನುವ ತತ್ವದೊಂದಿಗೆ ಮನಸ್ಸಿನಲ್ಲಿರುವ ಅಜ್ಞಾನವೆಂಬ ಕತ್ತಲನ್ನು ದೂರ ಸರಿಸಿ ಜ್ಞಾನವೆಂಬ ಬೆಳಕನ್ನು ಎಲ್ಲೆಡೆ ಚೆಲ್ಲುವ ಹಬ್ಬ, ಮನದ ಅಂಧಕಾರವನ್ನು ಕಳೆಯುವ ಹಬ್ಬವಾಗಿ ದೀಪಾವಳಿಯು ಎಲ್ಲರಿಗೂ ಸುಖ, ಶಾಂತಿ ಸಮೃದ್ಧಿಯನ್ನು ತರಲಿ.

Leave a Comment

Your email address will not be published. Required fields are marked *