ನ್ಯೂಸ್ ಡೆಸ್ಕ್: ಗಗನಕ್ಕೇರಿದ ತೈಲಬೆಲೆಯನ್ನು ಕಡಿತಗೊಳಿಸಲು ಕೇಂದ್ರ ಸರ್ಕಾರ ಕೊನೆಗೂ ಮನಸ್ಸು ಮಾಡಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ತಲಾ 5 ಮತ್ತು 10 ರೂ.ಗಳಷ್ಟು ಅಬಕಾರಿ ಸುಂಕ ಕಡಿಮೆ ಮಾಡಿದೆ. ಕೇಂದ್ರ ಸರ್ಕಾರ ದೀಪಾವಳಿ ಗಿಪ್ಟ್ ಅಂತ ಹೇಳಿಕೊಂಡರೂ ತೈಲಬೆಲೆಯಲ್ಲಿನ ತೆರಿಗೆ ಇಳಿಕೆ ಉಪಚುನಾವಣೆ ಸೋಲಿನ ಪರಿಣಾಮ ಎನ್ನುತ್ತಾರೆ ರಾಜಕೀಯ ತಜ್ಞರು.
ಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಿಂದ ಸಾಗಾಣಿಕೆ ವೆಚ್ಚ ಜಾಸ್ತಿಯಾಗಿ ಅಗತ್ಯ ವಸ್ತುಗಳ ಬೆಲೆಯೂ ಗಗನಕ್ಕೇರಿರುವುದು ಜನಸಾಮಾನ್ಯರಿಗೆ ನುಂಗಲಾರದ ತುತ್ತಾಗಿದೆ. ಇದೀಗ ಉಪ ಚುನಾವಣೆಯಲ್ಲಿ ಹಲವು ಕಡೆ ಬಿಜೆಪಿ ಅಭ್ಯರ್ಥಿಗಳನ್ನು ಮತದಾರರು ಸೋಲಿಸಿದ ಬೆನ್ನಲ್ಲೇ ತೈಲ ದರವೂ ಅಲ್ಪ ಇಳಿಕೆ ಕಂಡಿದೆ.
ತೈಲದರ ಏರಿಕೆ ಹಾಗೂ ಬೆಲೆ ಏರಿಕೆ ನಡುವೆಯೇ ಕಳೆದ ಅ.30ರಂದು ದೇಶದ 32 ಲೋಕಸಭಾ ಕ್ಷೇತ್ರಗಳು ಹಾಗೂ ವಿವಿಧ ರಾಜ್ಯಗಳಲ್ಲಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ನಡೆದಿತ್ತು. ನ.2ರಂದು ಈ ಉಪಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಹಲವು ಕಡೆ ಬಿಜೆಪಿ ತೀವ್ರ ಹಿನ್ನಡೆ ಅನುಭವಿಸಿತ್ತು. ಈ ಹಿನ್ನೆಲೆಯಲ್ಲಿ ದೀಪಾವಳಿ ಬಳಿಕ ಬಿಜೆಪಿ ತನ್ನ ಕಾರ್ಯಕಾರಣಿ ಸಭೆ ಕರೆದಿದ್ದು, ಈ ಬೆಳವಣಿಗೆಯ ನಡುವೆಯೇ ಪೆಟ್ರೊಲಿಯಂ ಮೇಲಿನ ತೆರಿಗೆ ಕಡಿತಗೊಳಿಸಿರುವುದು ಸೋಲರಿಯದ ಬಿಜೆಪಿಗೆ ಸೋಲಿನ ರುಚಿ ಉಣಿಸಿದ ಮತದಾರರ ಗೆಲುವು ಎಂದು ಬಣ್ಣಿಸಲಾಗಿದೆ. ಏನೇ ಆದರೂ ಈ ದರ ಇಳಿಕೆಯಿಂದ ದೇಶದ ಜನತೆ ಕೊಂಚ ನಿರಾಳವಾಗಿದ್ದು, ಇದು ಇನ್ನೆಷ್ಟು ದಿನ ಇರುವುದೊ ಕಾದು ನೋಡಬೇಕಿದೆ.