ಸುಳ್ಯ: ನಾಗರಿಕ ಸಮಾಜಕ್ಕೆ ಹೊಂದಿಕೊಳ್ಳುವ ಮೊದಲು ಮನುಷ್ಯ ಕಲ್ಲಿನಿಂದ ಉಜ್ಜಿ ಬೆಂಕಿ ತಯಾರಿಸುತ್ತಿದ್ದ ಎಂಬ ಬಗ್ಗೆ ಇತಿಹಾಸದಲ್ಲಿ ತಿಳಿದಿದ್ದು, ಹೀಗೆ ತಯಾರಿಸಿದ ಬೆಂಕಿಯನ್ನು ಬೆಳಕಾಗಿ ಉಪಯೋಗಿಸಲು ಬಳಸುತ್ತಿದ್ದ. ಆದರೆ ಪ್ರಕೃತಿಯ ಮಡಿಲಲ್ಲಿಯೂ ಇಂತದ್ದೇ ಒಂದು ಅಪರೂಪದ ಗಿಡವೊಂದು ಇದೀಗ ಪತ್ತೆಯಾಗಿದೆ.
ತಾಲೂಕಿನ ಪಂಜ ಎಂಬಲ್ಲಿ ಈ ಅಪರೂಪದ ಗಿಡ ಪತ್ತೆಯಾಗಿದೆ. ಇಲ್ಲಿನ ಅಳ್ಪೆ ನಿವಾಸಿ ಜಿನ್ನಪ್ಪ ಎನ್ನುವವರ ರಬ್ಬರ್ ತೋಟದಲ್ಲಿ ಈ ಗಿಡ ಪತ್ತೆಯಾಗಿದ್ದು, ಈ ಗಿಡ ಜಿನ್ನಪ್ಪ ಅವರ ಗಮನಕ್ಕೆ ಬರಲೂ ಒಂದು ಕಾರಣವಿದೆ. ಬೆಳದಿಂಗಳ ರಾತ್ರಿಯಲ್ಲಿ ಈ ಗಿಡದ ಎಲೆಯ ಚಿಗುರುಗಳು ಪ್ರಕಾಶಮಾನವಾಗಿ ಮಿಂಚುತ್ತಿರುವುದನ್ನು ಗಮನಿಸಿದ್ದ ಜಿನ್ನಪ್ಪರು ಬೆಳಿಗ್ಗಿನ ಜಾವ ಈ ಗಿಡದ ಬಳಿ ಬಂದು ಪರಿಶೀಲನೆ ನಡೆಸಿದ್ದರು. ಆದರೆ ಯಾವುದೇ ರೀತಿಯ ವಿಶೇಷತೆಯನ್ನು ಅಂದು ಅವರು ಗಮನಿಸಿರಲಿಲ್ಲ. ಮತ್ತೆ ರಾತ್ರಿ ಸಂದರ್ಭದಲ್ಲಿ ಅದೇ ರೀತಿಯ ಹೊಳಪು ಆ ಗಿಡದ ಎಲೆಗಳ ಚಿಗುರುಗಳಿಂದ ಕಂಡು ಬಂದ ಹಿನ್ನಲೆಯಲ್ಲಿ ಯಾವುದೇ ಬೆಳಕಿನ ಅಂಶವಿರುವ ಗಿಡವಾಗಿರಬಹುದೆಂದು ತಿಳಿದುಕೊಂಡಿದ್ದಾರೆ.’
ವಿಶೇಷ ಗಿಡದ ಹೆಸರು ಪ್ರಣತಿಪತ್ರ
ಈ ಕಾರಣಕ್ಕೆ ಗಿಡದ ಚಿಗುರುಗಳನ್ನು ಮನೆಗೆ ಕೊಂಡೊಯ್ದು, ದೀಪಕ್ಕೆ ಎಣ್ಣೆ ಹಾಕಿ ಹತ್ತಿಯ ಬತ್ತಿ ಬದಲು ಈ ಚಿಗುರುಗಳನ್ನು ಎಣ್ಣೆಯಲ್ಲಿ ಅದ್ದಿ ಬೆಂಕಿ ಕೊಟ್ಟಿದ್ದಾರೆ. ಹತ್ತಿಯ ಬತ್ತಿಗಿಂತಲೂ ಪ್ರಕಾಶಮಾನವಾಗಿ ಈ ಎಲೆಯ ಚಿಗುರು ಉರಿಯುತ್ತಿರುವುದನ್ನು ಕಂಡು ಆಶ್ಚರ್ಯಚಕಿತರಾಗಿದ್ದಾರೆ. ಈ ವಿಚಾರವನ್ನು ತಮ್ಮ ಪರಿಚಯವಿರುವ ಧಾರ್ಮಿಕ ಆಚರಣೆಯ ವ್ಯಕ್ತಿಯೊಬ್ಬರಲ್ಲಿ ತಿಳಿಸಿದಾಗ ಅವರು ಈ ಗಿಡದ ಬಗ್ಗೆ ಜಿನ್ನಪ್ಪರಿಗೆ ಮಾಹಿತಿ ನೀಡಿದ್ದಾರೆ. ಜಿನ್ನಪ್ಪ ಮಾಹಿತಿ ಪ್ರಕಾರ ಅಪರೂಪವಾಗಿ ಕಂಡ ಈ ಗಿಡ ಪ್ರಣತಿಪತ್ರ ಎಂದು ತಿಳಿದುಬಂದಿದೆ.
ಬೆಳಗ್ಗೆಯಿಂದ ಸಂಜೆಯ ತನಕ ನಿರಂತರ ಉರಿಯುತ್ತವೆ
ಸಾಮಾನ್ಯವಾಗಿ ಹತ್ತಿ ಅಥವಾ ಬಟ್ಟೆಯ ಬತ್ತಿಯನ್ನು ನಿರಂತರ ಒಂದೆರಡು ಗಂಟೆಗಳ ಕಾಲ ಉರಿಸಿದಲ್ಲಿ ಬತ್ತಿಯು ಕರಗಿ ಹೋದರೆ ಈ ಚಿಗುರು ಎಣ್ಣೆ ಹಾಕುತ್ತಿರುವವರೆಗೂ ನಿರಂತರವಾಗಿ ಉರಿಯುತ್ತದೆ. ಜಿನ್ನಪ್ಪರ ಪ್ರಕಾರ ಈ ಗಿಡ ಪತ್ತೆಯಾದ ಬಳಿಕ ಅವರ ಮೂಲ ಮನೆಯಲ್ಲಿ ನಡೆದ ಅಷ್ಟಮಂಗಲ ಪ್ರಶ್ನೆಯ ಸಂದರ್ಭದಲ್ಲಿ ಇದೇ ಎಲೆಯ ಚಿಗುರುಗಳನ್ನು ಬತ್ತಿಯ ರೂಪದಲ್ಲಿ ಬಳಸಿಕೊಂಡಿದ್ದು, ಬೆಳಿಗ್ಗಿನಿಂದ ಸಂಜೆಯ ತನಕ ಇದು ನಿರಂತರ ಉರಿಯುವುದನ್ನು ಪರಿಶೀಲನೆ ನಡೆಸಿರುವುದಾಗಿಯೂ ಜಿನ್ನಪ್ಪರು ಹೇಳುತ್ತಾರೆ.