ಮಂಗಳೂರು: ಎರಡು ವರ್ಷದ ಹೆಣ್ಣು ಮಗುವನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲದೆ, ನೀರಿನ ಹೊಂಡಕ್ಕೆ ಎಸೆದು ಹೋದ ದುಷ್ಕೃತ್ಯ ನಗರದಲ್ಲಿ ನಡೆದಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿಯನ್ನು ಬಿಹಾರ ಮೂಲದ ಚಂದನ್(33) ಎಂದು ಗುರುತಿಸಲಾಗಿದೆ. ಬಂದರಿನಲ್ಲಿ ಫಿಶ್ ಮಿಲ್ ಒಂದರಲ್ಲಿ ಬಿಹಾರ, ಉತ್ತರ ಪ್ರದೇಶ ಮೂಲದ 40ಕ್ಕೂ ಹೆಚ್ಚು ಕುಟುಂಬಗಳು ಕೆಲಸಕ್ಕಿದ್ದು, ಹೊಯ್ಗೆಬಜಾರ್ ನಲ್ಲಿ ಗುಡಿಸಲು ಕಟ್ಟಿಕೊಂಡು ವಾಸವಿದ್ದಾರೆ. ಅಲ್ಲಿನ ಕುಟುಂಬಗಳ ಮಕ್ಕಳು ಒಂದೇ ಕಡೆ ಆಟವಾಡಿಕೊಂಡು ಇದ್ದರು. ಈ ವೇಳೆ, ನಿನ್ನೆ ಸಂಜೆ ಹೆಣ್ಣು ಮಗುವೊಂದನ್ನು ಅಪಹರಿಸಿದ್ದ ಬಿಹಾರ ಮೂಲದ ಕಾರ್ಮಿಕ ಯುವಕ, ಲೈಂಗಿಕ ದೌರ್ಜನ್ಯಕ್ಕೆ ಬಳಸಿದ್ದಾನೆ.
ಆನಂತರ, ಮಗುವನ್ನು ಉಪ್ಪು ನೀರು ಶೇಖರಿಸುವ ಹೊಂಡಕ್ಕೆ ಎಸೆದಿದ್ದ. ಸಂಜೆ ವೇಳೆಗೆ ಘಟನೆ ನಡೆದಿದ್ದು, ಹೆತ್ತವರು ಬಂದು ನೋಡಿದಾಗ ಮಗು ಇರಲಿಲ್ಲ. ಬಳಿಕ ಸಾಕಷ್ಟು ಹುಡುಕಾಡಿದ್ದು ಎರಡು ಗಂಟೆಯ ಬಳಿಕ ಮಗು ನೀರಿನಲ್ಲಿ ಪತ್ತೆಯಾಗಿದೆ. ನೀರು ಕಡಿಮೆ ಇದ್ದುದರಿಂದ ಮೃತ ಆಗಿರಲಿಲ್ಲ. ಆದರೆ ಪ್ರಜ್ಞೆ ಕಳಕೊಂಡ ಸ್ಥಿತಿಯಲ್ಲಿತ್ತು. ರಾತ್ರಿಯೇ ಮಗುವನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಇಂದು ಬೆಳಗ್ಗಿನ ಹೊತ್ತಿಗೆ ಚಿಕಿತ್ಸೆಗೆ ಸ್ಪಂದಿಸಿದ್ದು, ಹುಷಾರಾಗಿದೆ ಎಂದು ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.
ಮಗುವನ್ನು ಮೊದಲಿಗೆ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಆಗೋದಿಲ್ಲ ಎಂದು ಹೇಳಿದ್ದಕ್ಕೆ ವೆನ್ಲಾಕ್ ಮಕ್ಕಳ ಚಿಕಿತ್ಸಾ ವಿಭಾಗಕ್ಕೆ ದಾಖಲು ಮಾಡಲಾಗಿತ್ತು. ಅಲ್ಲಿ ಮಗುವಿಗೆ ದೈಹಿಕ ಹಲ್ಲೆ ಮತ್ತು ಲೈಂಗಿಕ ದೌರ್ಜನ್ಯ ಎಸಗಿರುವ ಬಗ್ಗೆ ವೈದ್ಯರು ತಿಳಿಸಿದ್ದು, ಪೊಲೀಸರು ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಕೇಸು ದಾಖಲಿಸಿದ್ದಾರೆ. ನಿನ್ನೆ ಸಂಜೆಯೇ ಬಿಹಾರ ಮೂಲದ ಇತರ ಕಾರ್ಮಿಕರು ಸೇರಿ ಆರೋಪಿಯನ್ನು ಹಿಡಿದಿದ್ದು, ಆತನ ತಲೆ ಬೋಳಿಸಿ ಹಲ್ಲೆ ನಡೆಸಿದ್ದರು.