ಮಂಗಳೂರು: ಇಲ್ಲಿಂದ ಕುವೈತ್‌ಗೆ ತೆರಳುವ ಏರ್ ಇಂಡಿಯಾ ವಿಮಾನಗಳ ವೇಳಾಪಟ್ಟಿಯನ್ನು ನವೆಂಬರ್‌ನಿಂದ ಪರಿಷ್ಕರಿಸಲಾಗಿದ್ದು, ಈ ಬಾರಿಯೂ ಅನುಕೂಲ ಕಲ್ಪಿಸಿಲ್ಲ ಎನ್ನುವ ಆರೋಪ ಕುವೈತ್‌ನ ಅನಿವಾಸಿ ಕರಾವಳಿಗರಿಂದ ಕೇಳಿಬಂದಿದೆ.
ಕೋವಿಡ್-19 ಮೊದಲ ಅಲೆಯವರೆಗೆ ಸಮರ್ಪಕವಾಗಿದ್ದ ಮಂಗಳೂರು-ಕುವೈತ್ ವಿಮಾನದ ವೇಳಾಪಟ್ಟಿ, ಬಳಿಕ ದಿಢೀರನೆ ಬದಲಾಗಿದೆ.ಗುರುವಾರ ಕುವೈತ್‌ನಿಂದ ಹೊರಟು ಮಂಗಳೂರಿಗೆ ಬರುವವರಿಗೆ ಮೊದಲಿನ ವೇಳಾಪಟ್ಟಿ ಅನುಕೂಲವಾಗಿತ್ತು. ಕುವೈತ್
ನಲ್ಲಿ ಶುಕ್ರವಾರ ಮತ್ತು ಶನಿವಾರ ವಾರಾಂತ್ಯ ರಜೆ ಇರುವುದರಿಂದ, ಕರಾವಳಿ ಜನರು ಊರಿಗೆ ಬಂದು ಹೋಗಲು ಪ್ರಯೋಜನವಾಗುತ್ತಿತ್ತು. ರಜೆ ಇಲ್ಲದೆ ಭಾನುವಾರ ಮತ್ತೆ ಕೆಲಸಕ್ಕೆ ಹಾಜರಾಗಲು ಅವಕಾಶ ಸಿಗುತ್ತಿತ್ತು.
ನಂತರ ಈ ವೇಳಾಪಟ್ಟಿಯನ್ನು ಹಠಾತ್ತಾಗಿ ಬದಲಾಯಿಸಲಾಗಿದ್ದು, ವಿಮಾನ ಸಂಚಾರವನ್ನು ರಾತ್ರಿಯ ಬದಲು ಹಗಲಿಗೆ ನಿಗದಿಪಡಿಸಲಾಗಿತ್ತು. ಇದರಿಂದಾಗಿ ಕುವೈತ್‌ನಿಂದ ಮಂಗಳೂರಿಗೆ ಬರುವ ಜನರು ವಾರದ ಕರ್ತವ್ಯದ ಅವಧಿಯಲ್ಲಿ ರಜೆ ಹಾಕಿ ಬರಬೇಕಾಗುತ್ತಿತ್ತು. ಈ ಸಮಯವನ್ನು ಹಿಂದಿನಂತೆ ಮರು ನಿಗದಿಪಡಿಸುವಂತೆ ಕುವೈತ್‌ನ ಕರಾವಳಿಗರ ಸಂಘಟನೆಗಳು ಸಂಸದರಿಗೆ ಮನವಿ ಸಲ್ಲಿಸಿದ್ದವು.