ಮಂಗಳೂರು: ಅಕ್ಟೋಬರ್ 5ರಂದು ನಡೆದ ಮೋರ್ಗನ್ಸ್ ಗೇಟ್ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ರಾಜೇಶ್ ಪ್ರಭುಗೆ ಷರತ್ತು ಬದ್ಧ ಜಾಮೀನನ್ನು ಮಂಗಳೂರು 2ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಿಂದ ಮಂಜೂರುಗೊಂಡಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಾದ ಪ್ರತಿವಾದ ಆಲಿಸಿದ ಕೋರ್ಟ್ ಆರೋಪಿಯಿಂದ ಐದು ಲಕ್ಷ ರೂ. ಬಾಂಡ್ ಪಡೆದಿದ್ದು, ಆಕಸ್ಮಿಕವಾಗಿ ಗುಂಡು ಹಾರಲ್ಪಟ್ಟಿದೆ ಹಾಗೂ ಸ್ವಂತ ಮಗ ಎನ್ನುವ ಕಾರಣಕ್ಕೆ ಜಾಮೀನು ನೀಡಲಾಗಿದೆ ಎನ್ನುವ ಮಾಹಿತಿ ಲಭಿಸಿದೆ.
ಅಕ್ಟೋಬರ್ 5ರಂದು ನಡೆದ ಈ ಶೂಟೌಟ್ ಪ್ರಕರಣದಲ್ಲಿ, ಸಿಬ್ಬಂದಿಗಳಿಬ್ಬರ ವೇತನ ವಿಚಾರಕ್ಕೆ ಸಂಬಂಧಿಸಿದಂತೆ ರಾಜೇಶ್ ಅವರ ಕಚೇರಿಯಲ್ಲಿ ಘರ್ಷಣೆ ನಡೆದಿತ್ತು. ಈ ವೇಳೆ ಆಕಸ್ಮಿಕವಾಗಿ ಗುಂಡು ಹಾರಲ್ಪಟ್ಟಿತ್ತು. ಈ ವೇಳೆ ರಾಜೇಶ್ ಅವರ ಪುತ್ರ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದು, ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು. ಈ ಪ್ರಕರಣದಲ್ಲಿ ನ್ಯಾಯಾಧೀಶರಾದ ಅಭಯ್ ಧನ್ ಪಾಲ್ ಚೌಗಾಲ ಅವರು ತೀರ್ಪು ಘೋಷಿಸಿದ್ದು, ವಕೀಲರಾದ ವೈ ವಿಕ್ರಂ ಹೆಗ್ಡೆ, ನರಸಿಂಹ ಹೆಗ್ಡೆ ಆರೋಪಿ ರಾಜೇಶ್ ಪರ ವಾದಿಸಿದ್ದರು.