ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಧರ್ಮಾಂಧರ ಕಣ್ಣು ಮುಹಮ್ಮದ್ ಶಮಿ ಬಳಿಕ ಇದೀಗ ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಮೇಲೆ ಬಿದ್ದಿದೆ. ಮುಹಮ್ಮದ್ ಶಮಿ ವಿರುದ್ಧದ ಟೀಕೆಗಳಿಗೆ ಕಠಿಣ ಶಬ್ಧಗಳಲ್ಲಿ ಪ್ರತಿಕ್ರಿಯೆ ಕೊಟ್ಟಿದ್ದ ಕ್ಯಾಪ್ಟನ್ ಇದೀಗ ಧರ್ಮಾಂಧರ ಟಾರ್ಗೆಟ್ ಆಗಿದ್ದಾರೆ.
ಟ್ವಿಟರ್’ನಲ್ಲಿ ಪೋಸ್ಟ್ ಮಾಡಲಾದ ಕೊಹ್ಲಿ ಹೇಳಿಕೆಯ ಕೆಳಗಡೆ, ಅಮೆನಾ ಹೆಸರಿನ ಟ್ವಿಟರ್ ಖಾತೆಯಲ್ಲಿ’ ಅನುಷ್ಕಾ ಶರ್ಮಾಳಿಗೆ ನಾಚಿಕೆಯಾಗಬೇಕು. ವಮಿಕಾಳ ಫೋಟೋ ಬಿಡುಗಡೆಗೆ ಕಾಯುತ್ತಿದ್ದೇನೆ. ಆಕೆಯನ್ನು ಅತ್ಯಾಚಾರ ಮಾಡುತ್ತೇನೆ’ ಎಂದು ಬೆದರಿಕೆ ಹಾಕಲಾಗಿದೆ.
ಪತ್ರಕರ್ತೆ ಸ್ವಾತಿ ಚತುರ್ವೇದಿ, ಟ್ವಟರ್’ನಲ್ಲಿ ಈ ಸ್ಕ್ರೀನ್ ಶಾಟ್ ಹಂಚಿಕೊಂಡಿದ್ದು, ಧರ್ಮಾಂಧರ ವಿರುದ್ಧ ಮಾತನಾಡಿದ ಹಾಗೂ ಸಹ ಆಟಗಾರನ ಬೆಂಬಲಕ್ಕೆ ನಿಂತ ಕಾರಣಕ್ಕಾಗಿ ಪುಟ್ಟ ಬಾಲೆಯನ್ನೇ ಅತ್ಯಾಚಾರ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ. ಇಂಥಹವರು ಜೈಲಿನಲ್ಲಿರಬೇಕಾದವರು ಎಂದು ಟ್ವೀಟ್ ಮಾಡಿದ್ದಾರೆ.
ಮತ್ತೋರ್ವ ಟ್ವಿಟರ್ ಬಳೆಕೆದಾರ ಮೊಗಲ್ ಆದಿಲ್, ಮುಸ್ಲಿಂ ಆಟಗಾರನನ್ನು ಬೆಂಬಲಿಸಿದ ಕಾರಣಕ್ಕಾಗಿ 9 ತಿಂಗಳ ಬಾಲೆಯನ್ನು ಅತ್ಯಾಚಾರ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ. ಈ ಸಮಾಜವನ್ನು ಏನೆಂದು ಕರೆಯಬೇಕು ಎಂದು ಪ್ರಶ್ನಿಸಿದ್ದಾರೆ.
ಇಂಥವರು ಈ ಜಗತ್ತಿನಲ್ಲಿ ಇದ್ದಾರೆ, ಇವರು ನಮ್ಮ ನಡುವೆಯೇ ನಡೆದಾಡುತ್ತಿದ್ದಾರೆ ಎಂಬುದನ್ನು ಆಲೋಚಿಸಲು ಸಾಧ್ಯವಾಗುತ್ತಿಲ್ಲ ಎಂದು ಅಮ್ಯ ಎಂಬಾಕೆ ಬರೆದುಕೊಂಡಿದ್ದಾರೆ.
ಕಳೆದ ವರ್ಷ ಐಪಿಎಲ್’ನಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಕಾರಣ ವಿಕೃತ ಕಾಮಿಯೊಬ್ಬ ಮಹೇಂದ್ರ ಸಿಂಗ್ ಧೋನಿಯ ಪುತ್ರಿ ಝೀವಾಳನ್ನು ಅತ್ಯಾಚಾರ ಮಾಡುವುದಾಗಿ ಬೆದರಿಕೆ ಹಾಕಿದ್ದ. ಬಳಿಕ ಆತನನ್ನು ಬಂಧಿಸಲಾಗಿತ್ತು.