ವ್ಯಾಟಿಕನ್ ಸಿಟಿ: ಜಿ-20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲೆಂದು ಇಟಲಿ ಪ್ರವಾಸದಲ್ಲಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ವ್ಯಾಟಿಕನ್ ನಗರದಲ್ಲಿ ಕ್ರೈಸ್ತ ಧರ್ಮದ ಪರಮೋಚ್ಛ ಗುರು ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಕ್ಯಾಥೋಲಿಕ್ ಚರ್ಚ್ನ ಮುಖ್ಯಸ್ಥರಾಗಿರುವ ಪೋಪ್ ಫ್ರಾನ್ಸಿಸ್ ಅವರನ್ನ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿಯಾಗಿದ್ದು ಇದೇ ಮೊದಲು. ಜಗತ್ತಿನಲ್ಲಿ ಶಾಂತಿ ಮತ್ತು ನೆಮ್ಮದಿ, ಬಡತನ ನಿರ್ಮೂಲನೆ, ಉತ್ತಮ ಜೀವನ ನಿರ್ವಹಣೆ ಕುರಿತು ಪೋಪ್ ಫ್ರಾನ್ಸಿಸ್ ಮತ್ತು ನರೇಂದ್ರ ಮೋದಿ ಇಬ್ಬರೂ ಸುಮಾರು 1 ತಾಸು ಚರ್ಚಿಸಿದರು ಎಂದು ಮೂಲಗಳು ತಿಳಿಸಿವೆ.
ಪೋಪ್ ಫ್ರಾನ್ಸಿಸ್ ಅವರ ಭೇಟಿ ಬಳಿಕ ಫೋಟೋಗಳನ್ನು ಟ್ವಿಟರ್ ಹಂಚಿಕೊಂಡಿರುವ ನರೇಂದ್ರ ಮೋದಿ, ಪೋಪ್ ಫ್ರಾನ್ಸಿಸ್ ಅವರ ಭೇಟಿ ಅತ್ಯಂತ ಆತ್ಮೀಯವಾಗಿತ್ತು. ಅವರೊಂದಿಗೆ ಕೆಲವು ಮಹತ್ತರ ವಿಚಾರಗಳನ್ನ ಚರ್ಚಿಸಲು ಅವಕಾಶ ಸಿಕ್ಕಿತು. ಅವರನ್ನು ಭಾರತಕ್ಕೆ ಆಹ್ವಾನಿಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.