ಮಂಗಳೂರು: ಕಳೆದೊಂದು ವಾರದಿಂದ ಸುಳ್ಯ ಸಿವಿಲ್ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಸೋಮಶೇಖರ್ ಹಾಗೂ ಯಶವಂತಕುಮಾರ್ ರವರ ಕಾರ್ಯವೈಖರಿ ಗಮನಿಸಿದಾಗ ಸುಳ್ಯದ ಪ್ರತಿಯೊಬ್ಬ ನಾಗರೀಕರ ಮನಸ್ಸಲ್ಲಿ ಬರುವ ಪ್ರಶ್ನೆಯೇ ಇದು..! ಪಾದರಸದಂತೆ ಸಮಸ್ಯೆ ಬಂದಲ್ಲಿಗೆ ತೆರಳಿ ಜನರ ಭಾವನೆಗಳನ್ನು ಅರ್ಥ ಮಾಡಿಕೊಂಡು ಸ್ಥಳದಲ್ಲೇ ಸೂಕ್ತ ಪರಿಹಾರ ಒದಗಿಸುತ್ತಾ ಜನಪ್ರತಿನಿಧಿ, ಅಧಿಕಾರ ವರ್ಗದವರು ಮಾಡಬೇಕಾದ ಕೆಲಸವನ್ನು ಮಾಡುತ್ತಾ ಜನಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಹೀಗಿದ್ದಾಗ ನಮಗೆ ಅಸಡ್ಡೆ ಹೊಂದಿರುವ ಜನಪ್ರತಿನಿಧಿಗಳು, ಅಧಿಕಾರಿಗಳು ಯಾಕೆ ಬೇಕು? ಎಂದು ಅಂದುಕೊಳ್ಳುವುದು ಸಹಜ.


ಕಳೆದೆ ಸೋಮವಾರ ಪ್ರಾಥಮಿಕ ಶಾಲೆಗಳು ಶುರುವಾದಾಗ ತಾಲೂಕಿನ ಬೆಳ್ಳಾರೆ ಬಳಿಯ ಹಳ್ಳಿಯೊಂದರಲ್ಲಿ ಮಕ್ಕಳೇ ಕೈಯಲ್ಲಿ ಹಾರೆ ಹಿಡಿದು ಶಾಲೆಗೆ ಹೋಗುವ ರಸ್ತೆಯನ್ನು ಸರಿಪಡಿಸುವ ಫೋಟೋ ಒಂದು ಜಾಲತಾಣಗಳಲ್ಲಿ ವೈರಲ್ ಆಗಿತ್ತು. ರಾಜ್ಯದ ಪ್ರತೀ ಮಾಧ್ಯಮಗಳೂ ಇದನ್ನು ಮುಖ್ಯ ವಿಷಯವಾಗಿ ಸುದ್ದಿ ಮಾಡಿದ್ದರು. ಆದರೆ ನಮ್ಮ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಇದು ಪ್ರಮುಖ ಸಮಸ್ಯೆಯೇ ಆಗಿರಲಿಲ್ಲ. ಮಾಧ್ಯಮಗಳಲ್ಲಿ ಬಂದ ಸುದ್ದಿ ನೋಡಿದ ಸುಳ್ಯ ಸಿವಿಲ್ ಕೋರ್ಟ್ ನ ಹಿರಿಯ ಹಾಗೂ ಕಿರಿಯ ನ್ಯಾಯಾಧೀಶರಿಬ್ಬರು ತಕ್ಷಣ ಸ್ಥಳಕ್ಕೆ ಭೇಟಿ ಇತ್ತು, ಬೆಳ್ಳಾರೆ ಪಂಚಾಯತ್ ಅಧಿಕಾರಿ, ಅಧ್ಯಕ್ಷರು ಹಾಗೂ ಇನ್ನಿತರ ಪ್ರಮುಖರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಬೆಳ್ಳಾರೆ ಠಾಣೆ ಎಸ್.ಐ ಆಂಜನೇಯ ರೆಡ್ಡಿಗೆ ಸೂಚಿಸಿದ್ದರು. ಬಳಿಕ ನ್ಯಾಯಾಧೀಶರ ಮನವೊಲಿಸಿದ ಎಸ್ಐ ಮೊಕದ್ದಮೆ ದಾಖಲಿಸುವ ಬದಲು ಪಂಚಾಯತ್ ನಿಂದ ರಸ್ತೆಗೆ ಸೂಕ್ತ ಕ್ರಮ ಕೈಗೊಳ್ಳಲು ಸಲಹೆ ನೀಡಿದ್ದರು. ಆ ಬಳಿಕ ತಾತ್ಕಾಲಿಕ ವಾಗಿ ರಸ್ತೆಯನ್ನು ದುರಸ್ಥಿಗೊಳಿಸಲಾಯಿತು.

ಈ ಘಟನೆ ಬಳಿಕ ನ್ಯಾಯಾಧೀಶರ ಕಣ್ಣು ಕೆಂಪಾಗಿಸಿದ್ದು ಸುಳ್ಯ ನ.ಪಂ ನ ದುರವಸ್ಥೆ. ಸುಳ್ಯ ನಗರದ ಪ್ರಮುಖ ವಾರ್ಡ್ ಗಳಿಗೆ ಕೆಸರು ನೀರು ಪೂರೈಕೆ ಮಾಡಿ ಮಹತ್ಸಾಧನೆ ಮಾಡಿತ್ತು ಸುಳ್ಯ. ನ.ಪಂ.
ಪಯಸ್ವಿನಿ ನದಿಯಲ್ಲಿ ಮಳೆ ಕಾರಣದಿಂದ ನೀರು ಹೆಚ್ಚಾಗಿದ್ದು, ನಗರಕ್ಕೆ ಪೂರೈಸಲಾಗುವ ನೀರಿನಲ್ಲಿ ನದಿನೀರು ಶುದ್ದೀಕರಣವಾಗದೇ ಪೂರೈಕೆಯಾಗಿ ನಾಗರಿಕರ ಮನೆಗಳ ನಲ್ಲಿಯಲ್ಲಿ ಕೆಸರು ನೀರು ಬರ್ತಾ ಇತ್ತು. ಇದರಿಂದ ನ.ಪಂ ಗೆ ದೂರುಗಳು ಬಂದರೂ ಪಂಚಾಯತ್ ಕ್ಯಾರೇ ಎನ್ನಲಿಲ್ಲ. ಸಾರ್ವಜನಿಕ ಕಳಕಳಿಯಿಂದ ದಿಢೀರ್ ಕಲ್ಲುಮುಟ್ಲುವಿನ ಪಂಪ್ ಹೌಸ್ ಗೆ ಭೇಟಿ ನೀಡಿದ ಹಿರಿಯ ನ್ಯಾಯಾಧೀಶ ಸೋಮಶೇಖರ್ ಹಾಗೂ ಕಿರಿಯ ನ್ಯಾಯಾಧೀಶ ಯಶವಂತಕುಮಾರ್ ರವರು ನ.ಪಂ ಅಧ್ಯಕ್ಷರು, ಮುಖ್ಯಾಧಿಕಾರಿ, ಇಂಜಿನಿಯರಿಂಗ್ ರನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡರು. ನ್ಯಾಯಾಧೀಶರ ಕೋಪಾವೇಶಕ್ಕೆ ನ.ಪಂ ನ ಆಡಳಿತ ಹಾಗೂ ಸಿಬ್ಬಂದಿ ವರ್ಗ ಗಲಿಬಿಲಿಗೊಂಡಿದ್ದು, ತಕ್ಷಣ ಪರಿಹಾರ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿತು.

ಕೋರ್ಟ್ ಒಳಗೆ ಕೇಸುಗಳ ವಿಚಾರಣೆ ನಡೆಸಿ ನ್ಯಾಯ ತೀರ್ಮಾನ ಕೈಗೊಳ್ಳುವ ನ್ಯಾಯಾಧೀಶರು ಜನರ ಮಧ್ಯೆ ಬೆರೆಯುವುದೇ ಕಡಿಮೆ. ಅಂತದ್ದರಲ್ಲಿ ಸುಳ್ಯದ ಈ ಜಡ್ಜ್ ಸಾಹೇಬ್ರು ಸಾರ್ವಜನಿಕ ಹಿತಾಸಕ್ತಿ ಕೆಲಸ ಮಾಡುತ್ತಿರುವುದು ಕಂಡು ಜನತೆ ಪುಲ್ ಖುಷ್ ಆಗಿದ್ದಾರೆ. ಇದ್ದರೆ ಇಂತವರಿರಬೇಕು ಅನ್ನುತ್ತಿದ್ದಾರೆ. ಹಿಂದೊಮ್ಮೆ ತಾಲೂಕು ತಹಶಿಲ್ದಾರ್ ಆಗಿದ್ದ ಕುಂಞಿ ಅಹ್ಮದ್ ರವರು ಇದೇ ರೀತಿ ಜನಮೆಚ್ಚುಗೆ ಗಳಿಸಿದ್ದು, ಜನರ ಪ್ರೀತಿಗೆ ಪಾತ್ರರಾಗಿದ್ದರು. ಇದೀಗ ನ್ಯಾಯಮೂರ್ತಿಗಳು ಇವರ ದಾರಿಯಲ್ಲಿ ಸಾಗುತ್ತಿರುವುದು ಮಲಗಿ ನಿದ್ರಿಸುತ್ತಿರುವ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಚೇಳು ಬಿಟ್ಟಂತಾಗಿದ್ದರೆ, ಜನರಿಗೆ ಮರುಭೂಮಿ ನಡುವೆ ಕಂಡ ‘ಓಯಸಿಸ್’ ನಂತಾಗಿದೆ.