ಮಂಡ್ಯ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ಗವಣೆ ಬಳಿಕ ಈ ಹುದ್ದೆ ನೇಮಕ ವಿಚಾರ ಬಗೆಹರಿಯುವಂತೆ ಕಾಣುತ್ತಿಲ್ಲ. ಇದರಿಂದ ಸರ್ಕಾರ ಹಾಗೂ ಗೃಹ ಇಲಾಖೆ ವಿರುದ್ಧ ಸಾರ್ವಜನಿಕರು ಎಸ್‌ಪಿ ಹುದ್ದೆ ಹರಾಜಿಗಿದೆ, `ಹೆಚ್ಚು ಬಿಡ್ ಕೂಗಿದವರಿಗೆ ಅವಕಾಶ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುವ ಮೂಲಕ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಸ್‌ಪಿ ಅವರನ್ನು ವರ್ಗಾವಣೆ ಮಾಡಿ ಒಂದು ವಾರ ಕಳೆದರೂ ಬೇರೆ ಎಸ್‌ಪಿ ನೇಮಕ ಮಾಡದೆ ಹುದ್ದೆ ಖಾಲಿ ಉಳಿದಿದೆ. ಈ ಹಿನ್ನೆಲೆ ಎಸ್‌ಪಿ ಹುದ್ದೆ ಬಿಕರಿಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಸಾರ್ವಜನಿಕರು ಮಂಡ್ಯ ಎಸ್‌ಪಿ ಹುದ್ದೆ ಹರಾಜಿಗಿದೆ. ಹೆಚ್ಚು ಬಿಡ್ ಕೂಗಿದವರಿಗೆ ಸರ್ಕಾರ ಆದೇಶ ಬರಲಿದೆ. ಭ್ರಷ್ಟ ಕೆಎಸ್‌ಪಿಎಸ್ ಹಾಗೂ ಐಪಿಎಸ್ ಅಧಿಕಾರಿಗಳಿಗೆ ಸುವರ್ಣಾವಕಾಶ ಎಂಬ ಪೋಸ್ಟ್ ಹರಿದಾಡುತ್ತಿದೆ.
ಕಳೆದ ಅ.20 ರಂದು ಎಸ್‌ಪಿಯಾಗಿದ್ದ ಡಾ.ಎಂ.ಅಶ್ವಿನಿ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು. ಅವರ ಜಾಗಕ್ಕೆ ಮೈಸೂರಿನ ಪೊಲೀಸ್ ಅಕಾಡೆಮಿಯಲ್ಲಿದ್ದ ಸುಮನ್ ಡಿ.ಪನ್ನೇಕರ್ ಅವರನ್ನು ನೇಮಿಸಿತ್ತು. ಆದರೆ ಅಧಿಕಾರ ಪಡೆಯುವ ಮುನ್ನವೇ ಗೃಹ ಇಲಾಖೆ ತಡೆ ನೀಡಿತ್ತು. ಆದರೆ ಅಶ್ವಿನಿ ಅವರು ಅ.21ರಂದೇ ಎಎಸ್‌ಪಿ ವಿ.ಧನಂಜಯ ಅವರಿಗೆ ಅಧಿಕಾರ ಹಸ್ತಾಂತರಿಸಿದ್ದರು.