Ad Widget .

ಕನ್ನಡ ರಾಜ್ಯೋತ್ಸವ ಹಿನ್ನೆಲೆ| ಇಂದು ಲಕ್ಷ ಕಂಠಗಳ ಗೀತಗಾಯನ| ಕಂಡು ಕೇಳರಿಯದ ಗಳಿಗೆಗೆ ಸಾಕ್ಷಿಯಾಗಲಿದೆ ಕರ್ನಾಟಕ|

Ad Widget . Ad Widget .

ಬೆಂಗಳೂರು: ರಾಜ್ಯದಲ್ಲಿ ನವೆಂಬರ್ 1 ಕನ್ನಡ ರಾಜ್ಯೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಈ ನಡುವಲ್ಲೇ ಹಿಂದೆಂದೂ ನಡೆದಿರದ ಅಭೂತಪೂರ್ವ ಕನ್ನಡ ಉತ್ಸವ ನಡೆಸಲು ಸಕಲ ಸಿದ್ಧತೆಗಳೂ ನಡೆದಿವೆ.

Ad Widget . Ad Widget .

ಕನ್ನಡಕ್ಕಾಗಿ ನಾವು ಅಭಿಯಾನದ ಅಂಗವಾಗಿ ಅಕ್ಟೋಬರ್ 28 ರಂದು ಆಯೋಜಿಸಿರುವ ಲಕ್ಷ ಕಂಠಗಳ ಕನ್ನಡ ಗೀತಗಾಯನ ಕಾರ್ಯಕ್ರಮ ಅಸಾಧಾರಣ ರೀತಿಯಲ್ಲಿ ಆಯೋಜಿಸಿ ಯಶಸ್ವಿಗೊಳಿಸಲು ರಾಜ್ಯದ ಎಲ್ಲ 31 ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳ ಜೊತೆ ಚರ್ಚಿಸಿ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ರಾಜ್ಯದ ಸಾವಿರಕ್ಕೂ ಹೆಚ್ಚು ಸ್ಥಳಗಳಲ್ಲಿ ಐದು ಲಕ್ಷಕ್ಕೂ ಅಧಿಕ ಮಂದಿ ಈ ಗೀತಗಾಯನದಲ್ಲಿ ಭಾಗವಹಿಸಲಿದ್ದಾರೆ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ಹೇಳಿದ್ದಾರೆ.

ಸರ್ಕಾರದ ಸಚಿವರ ಸಹಕಾರದೊಂದಿಗೆ ವಿವಿಧ ಇಲಾಖೆಗಳ ಜೊತೆ ಸಮನ್ವಯ ಸಾಧಿಸಿ ಈ ಕಾರ್ಯಕ್ರಮ ರೂಪಿಸಲಾಗಿದೆ. ಅಕ್ಟೋಬರ್ 28 ರಂದು ನಡೆಯಲಿರುವ ಈ ಗೀತಗಾಯನ ಕೇವಲ ಸರ್ಕಾರದ ಅಧಿಕಾರಿ ಸಿಬ್ಬಂದಿಗಳು ಮಾಡುವ ಸರ್ಕಾರಿ ಕಾರ್ಯಕ್ರಮವಾಗದೇ ಕನ್ನಡ ನಾಡಿನ ಜನಮಾನಸದ ಅಭಿಮಾನದ ಕಾರ್ಯಕ್ರಮವಾಗಿ ರೂಪುಗೊಳ್ಳಬೇಕು ಸ್ವಯಂ ಸ್ಫೂರ್ತಿಯಿಂದ ಜನತೆ ಈ ಗೀತಗಾಯನದಲ್ಲಿ ಹಾಡುವ ಮೂಲಕ ತಮ್ಮ ಅಭಿಮಾನ ಮತ್ತು ಕನ್ನಡ ಭಾಷೆ ಬಗೆಗಿನ ಪ್ರೀತಿಯನ್ನ ಅಭಿವ್ಯಕ್ತಿಗೊಳಿಸಲು ವೇದಿಕೆಯನ್ನಾಗಿ ಮಾಡುವ ಜವಾಬ್ದಾರಿ ಪ್ರತಿ ಜಿಲ್ಲಾಡಳಿತದ ಮೇಲಿದೆ. ಅದಕ್ಕೆ ಬೇಕಾದ ಪೂರ್ವಸಿದ್ಧತೆ, ಮಾಹಿತಿ ನೀಡುವಿಕೆ ಮತ್ತು ಕಾರ್ಯಕ್ರಮ ಆಯೋಜನೆಗೆ ಪೂರ್ಣ ಬದ್ಧತೆಯೊಂದಿಗೆ ಕೆಲಸ ಮಾಡಬೇಕೆಂದು ಜಿಲ್ಲಾಡಳಿತಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಗ್ರಾಮಪಂಚಾಯಿತಿ ಮಟ್ಟದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಈ ಕಾರ್ಯಕ್ರಮದ ಜವಾಬ್ದಾರಿ ವಹಿಸಬೇಕು. ಇದಕ್ಕಾಗಿ ಪ್ರತ್ಯೇಕ ನೋಡಲ್ ಅಧಿಕಾರಿಗಳನ್ನು ನೇಮಿಸಿ ಹಾಡುವ ತಂಡಗಳ ಮಾಹಿತಿ, ಅವರಿಗೆ ಬೇಕಾದ ಕನಿಷ್ಠ ಅಗತ್ಯಗಳು ಮತ್ತು ಈ ಕಾರ್ಯಕ್ರಮದ ಪ್ರಚಾರ ಕಾರ್ಯನಿರ್ವಹಿಸಬೇಕೆಂದು ಸೂಚಿಸಲಾಗಿದೆ.

ರಾಷ್ಟ್ರಕವಿ ಕುವೆಂಪು ಅವರ ‘ಬಾರಿಸು ಕನ್ನಡ ಡಿಂಡಿಂಮವ’, ನಿಸಾರ್ ಅಹಮ್ಮದ್ ಅವರ ‘ಜೋಗದ ಸಿರಿ ಬೆಳಕಿನಲ್ಲಿ’ ಹಾಗೂ ಡಾ. ಹಂಸಲೇಖ ಅವರ ‘ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು’- ಈ ಮೂರು ಗೀತೆಗಳು ಅಕ್ಟೋಬರ್ 28 ರಂದು ಬೆಳಿಗ್ಗೆ 11 ಗಂಟೆಗೆ ಏಕ ಕಾಲದಲ್ಲಿ ರಾಜ್ಯಾದ್ಯಂತ ಮೊಳಗಲಿವೆ.

ಇದಕ್ಕೆ ಬೇರ ಬೇರೆ ರಾಜ್ಯಗಳಲ್ಲಿ ನೆಲೆಸಿರುವ ಹಾಗೂ ವಿಶ್ವಾದ್ಯಂತ ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರು, ಕನ್ನಡ ಕೂಟಗಳು ತಮಗೆ ಒದಗಿಸಿರುವ ನಿರ್ದಿಷ್ಟ ಜಾಲತಾಣ ಸಂಪರ್ಕದ ಮೂಲಕ ಒಟ್ಟಿಗೆ ಸೇರಿ ಹಾಡುವ ತಾಂತ್ರಿಕ ಸಂಯೋಜನೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರೂಪಿಸಿದೆ.

ಇದರ ಮೂಲಕ ಒಂದೇ ಬಾರಿ ವಿಶ್ವದಾದ್ಯಂತ ಕನ್ನಡ ಗೀತೆಗಳು ಲಕ್ಷ ಲಕ್ಷ ಕಂಠಗಳಲ್ಲಿ ಮೊಳಗಲಿದೆ. ಇದು ಈ ಹಿಂದೆ ಎಂದೂ ನಡೆದಿರದ ಬೃಹತ್ ಹಾಗೂ ಅವಿಸ್ಮರಣೀಯ ಕಾರ್ಯಕ್ರಮವಾಗಲಿದೆ.

ಇಡೀ ನಾಡನ್ನು ಈ ಬಾರಿಯ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಕನ್ನಡಮಯವನ್ನಾಗಿ ಮಾಡಲು, ಕನ್ನಡದ ಭಾವಲಹರಿ ಜನಮನದ ನರನಾಡಿಗಳಲ್ಲಿ ಸಂಚರಿಸುವ ರೋಮಾಂಚನವನ್ನು ಉಂಟು ಮಾಡಬೇಕೆಂಬ ಮಹತ್ವಾಕಾಂಕ್ಷೆಯಿಂದ ಈ ಅಭಿಯಾನ ರೂಪುಗೊಂಡಿದೆ.

Leave a Comment

Your email address will not be published. Required fields are marked *