Ad Widget .

ಅಪ್ರಾಪ್ತ ಯುವತಿ ಮಗುವಿಗೆ ಜನ್ಮ ನೀಡಲು ಸಾಥ್ ನೀಡಿದ ಯುಟ್ಯೂಬ್| ಪೊಲೀಸ್ ಠಾಣೆಯಲ್ಲಿ ದಾಖಲಾಯಿತು ಅತ್ಯಾಚಾರ ಪ್ರಕರಣ|

Ad Widget . Ad Widget .

ತಿರುವನಂತಪುರ: ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ 17 ವರ್ಷದ ಹುಡುಗಿಯೊಬ್ಬಳು ತನ್ನ ಪ್ರಿಯಕರನಿಂದ ಗರ್ಭಿಣಿಯಾಗಿ ಬಳಿಕ ಆಕೆ ಯೂಟ್ಯೂಬ್ ವೀಡಿಯೋಗಳ ಸಹಾಯದಿಂದ ಮನೆಯಲ್ಲಿ ತಾನೇ ಹೆರಿಗೆ ಮಾಡಿಕೊಂಡು ಗಂಡು ಮಗುವಿಗೆ ಜನ್ಮ ನೀಡಿರುವ ಘಟನೆ ಬೆಳಕಿಗೆ ಬರುತ್ತಿದ್ದಂತೆ ಪ್ರಿಯಕರನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ.

Ad Widget . Ad Widget .

ಅ. 20ರಂದು ಹುಡುಗಿ ಮಗುವಿಗೆ ಜನ್ಮ ನೀಡಿದ್ದು ಈ ವೇಳೆ ಯೂಟ್ಯೂಬ್ ವೀಡಿಯೋಗಳನ್ನು ಮಾರ್ಗದರ್ಶಿಯಾಗಿ ಬಳಸಿಕೊಂಡು ಹೊಕ್ಕಳ ಬಳ್ಳಿಯನ್ನು ಕತ್ತರಿಸಿಕೊಂಡಿದ್ದಾಳೆ. ಸಂಪೂರ್ಣ ಹೆರಿಗೆ ಪ್ರಕ್ರಿಯೆಯನ್ನು ಹುಡುಗಿ ಯಾವುದೇ ಹೊರಗಿನವರ ಸಹಾಯ ಪಡೆಯದೇ ತಾನೇ‌ ಮಾಡಿಕೊಂಡಿದ್ದಾಳೆ ಎಂಬ ವಿಚಾರ ತನಿಖೆ ವೇಳೆ ಪೊಲೀಸರಿಗೆ ತಿಳಿದುಬಂದಿದೆ.

ಸದ್ಯ ಮಂಜೇರಿಯ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ತಾಯಿ ಮತ್ತು ಮಗುವನ್ನು ದಾಖಲಿಸಲಾಗಿದ್ದು, ಇಬ್ಬರು ಆರೋಗ್ಯವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೇ ಆಕೆಯನ್ನು ಗರ್ಭಿಣಿ ಮಾಡಿದ 21 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದು, ಆತನ ವಿರುದ್ಧ ಪೋಕ್ಸೊ ಕಾಯ್ದೆ ಮತ್ತು ಐಪಿಸಿ ಸೆಕ್ಷನ್ 376(ಅತ್ಯಾಚಾರ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಅಕ್ಟೋಬರ್ 22 ರಂದು ಮಗು ಅಳುವ ಶಬ್ಧ ಕೇಳಿ ಪೋಷಕರಿಗೆ ಘಟನೆ ಕುರಿತಂತೆ ತಿಳಿದುಬಂದಿದೆ. ಮಗುವಿಗೆ ಜನ್ಮ ನೀಡಿದ ಹುಡುಗಿಗೆ ಸೋಂಕು ಕಾಣಿಸಿಕೊಂಡ ಹಿನ್ನೆಲೆ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿರುವುದರ ಬಗ್ಗೆ ಪೋಷಕರು ಪೊಲೀಸರಿಗೆ ತಿಳಿಸಿದ್ದಾರೆ.

ಹುಡುಗಿ ಪಿಯುಸಿ ವಿದ್ಯಾರ್ಥಿನಿಯಾಗಿದ್ದು, ಈಕೆಯ ತಾಯಿಗೆ ದೃಷ್ಟಿದೋಷವಿದ್ದು, ಆಕೆಯ ತಂದೆಯಿಂದ ಕೂಡ ಗರ್ಭಾವಸ್ಥೆಯನ್ನು ಮರೆಮಾಡುವಲ್ಲಿ ಯಶಸ್ವಿಯಾಗಿದ್ದಳು. ಅಲ್ಲದೇ ಹುಡುಗಿ ಗರ್ಭಾವಸ್ಥೆಯಲ್ಲಿ ಎರಡು ಆಸ್ಪತ್ರೆಗಳಿಂದ ವೈದ್ಯಕೀಯ ನೆರವು ಪಡೆದಿದ್ದಳು. ಹೀಗಾಗಿ ಈ ಆಸ್ಪತ್ರೆಗಳಿಂದ ಯಾವುದಾದರೂ ಲೋಪಗಳಿದ್ದರೆ ಅದನ್ನು ಸಿಡಬ್ಲೂಸಿ ವಿಚಾರಿಸುತ್ತದೆ ಎಂದು ಮಕ್ಕಳ ಕಲ್ಯಾಣ ಸಮಿತಿ ತಿಳಿಸಿದೆ.

ಹುಡುಗಿ ಮತ್ತು ಯುವಕ ಇಬ್ಬರು ಹಲವು ದಿನಗಳಿಂದ ಪ್ರೀತಿಸುತ್ತಿದ್ದರು. ಇಬ್ಬರ ಕುಟುಂಬಸ್ಥರು ಕಾನೂನುಬದ್ಧವಾಗಿ ಬಾಲಕಿಗೆ 18 ವರ್ಷ ತುಂಬಿದ ಬಳಿಕ ಇಬ್ಬರಿಗೂ ಮದುವೆ ಮಾಡಲು ಚಿಂತನೆ ನಡೆಸಿದ್ದರು. ಇದೀಗ ಹುಡುಗಿ ಹಾಗೂ ಮಗುವಿಗೆ ಯುವಕನ ಕುಟುಂಬಸ್ಥರು ಚಿಕಿತ್ಸೆ ಕೊಡಿಸುತ್ತಿದ್ದಾರೆ. ಆದರೆ ಹುಡುಗಿಗೆ ಇನ್ನೂ 17 ವರ್ಷವಾಗಿರುವುದರಿಂದ ಪೊಲೀಸರು ಇದನ್ನೂ ಅತ್ಯಾಚಾರ ಪ್ರಕರಣ ಎಂದು ಪರಿಗಣಿಸಿದ್ದಾರೆ.

Leave a Comment

Your email address will not be published. Required fields are marked *