ಚಂಡೀಗಡ: ಲಖಿಂಪುರ ಘಟನೆ ಜನರ ಮನಸ್ಸಿನಿಂದ ಮಾಸುವ ಮುನ್ನವೇ ರ‍್ಯಾಣದ ಜಜ್ಜಾರ್ ಜಿಲ್ಲೆಯಲ್ಲಿ ಲಾರಿಯೊಂದು ರೈತರ ಮೇಲೆ ಹರಿದ ಪರಿಣಾಮ ಮೂವರು ಮಹಿಳಾ ರೈತರು ಸಾವನ್ನಪ್ಪಿ, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಗುರುವಾರ ಬೆಳಗ್ಗೆ ನಡೆದಿದೆ.
ಮಹಿಳೆಯರು ರೈತರ ಪ್ರತಿಭಟನೆಯಲ್ಲಿ ಪಾಲ್ಗೊಂಡ ಬಳಿಕ ಪಂಜಾಬ್ ನ ಮಾನ್ಸಾದಲ್ಲಿರುವ ತಮ್ಮ ಸ್ವಗ್ರಾಮಕ್ಕೆ ಮರಳಲು ಆಟೋರಿಕ್ಷಕ್ಕಾಗಿ ಕಾಯುತ್ತಿದ್ದಾಗ ವೇಗವಾಗಿ ಬಂದ ಲಾರಿಯೊಂದು ಅವರ ಮೇಲೆ ಹರಿದ ಪರಿಣಾಮ ಮೂವರು ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸಾವನ್ನಪ್ಪಿದವರನ್ನು ಅಮರ್ ಜೀತ್ ಕೌರ್, ಗರ್ಮೈಲ್ ಕೌರ್ ಮತ್ತು ಸಿಕಂದರ್ ಕೌರ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಳಿಗ್ಗೆ 6 ಗಂಟೆಯ ಸುಮಾರಿಗೆ ಈ ಘಟನೆ ಸಂಭವಿಸಿದೆ. ಸುಮಾರು ಏಳು ಮಂದಿ ಮಹಿಳಾ ರೈತರ ಗುಂಪು ರೈಲು ನಿಲ್ದಾಣಕ್ಕೆ ಹೋಗಲು ಆಟೋರಿಕ್ಷಾಕ್ಕಾಗಿ ಕಾಯುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಮಣ್ಣು ಸಾಗಿಸುತ್ತಿದ್ದ ಟಿಪ್ಪರ್ ಲಾರಿ, ಮಹಿಳಾ ರೈತರ ಗುಂಪಿಗೆ ಹರಿದಿದೆ. ಅವರಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಾಯಾಳುಗಳನ್ನು ಸಿವಿಲ್ ಆಸ್ಪತ್ರೆಗೆ ರವಾನಿಸಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಪಿಜಿಐ ರೋಹ್ಟಕ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಗಾಯಗೊಂಡವರಲ್ಲಿ ಒಬ್ಬರು ರೋಹ್ಟಕ್ ಆಸ್ಪತ್ರೆಗೆ ಸಾಗಿಸುವ ಮರ‍್ಗದಲ್ಲಿ ಸಾವನ್ನಪ್ಪಿದ್ದಾರೆ, ಇಬ್ಬರು ಮಹಿಳೆಯರು ಅಪಾಯದಿಂದ ಪಾರಾಗಿದ್ದಾರೆ ಎಂದು ಜಜ್ಜಾರ್ ಪೊಲೀಸ್ ವರಿಷ್ಠಾಧಿಕಾರಿ ವಸೀಂ ಅಕ್ರಂ ತಿಳಿಸಿದ್ದಾರೆ. ಗಾಯಗೊಂಡಿರುವ ಇತರ ಇಬ್ಬರು ಮಹಿಳೆಯರನ್ನು ಗರ‍್ಮೆಲ್ ಕೌರ್ ಮತ್ತು ರ‍್ಮೀತ್ ಕೌರ್ ಎಂದು ಗುರುತಿಸಲಾಗಿದೆ. ಎಲ್ಲರೂ ಮಾನ್ಸಾ ಜಿಲ್ಲೆಯ ದಿಯಾಲುವಾಲಾ, ಬ್ಲಾಕ್ ಭಿಖಿ ಗ್ರಾಮದಿಂದ ಬಂದವರು ಎಂದು ಪೊಲೀಸರು ತಿಳಿಸಿದ್ದಾರೆ. ಲಾರಿ ಚಾಲಕ ಲಾರಿಯನ್ನು ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಾರತೀಯ ಕಿಸಾನ್ ಯೂನಿಯನ್ ನ ಸದಸ್ಯ ಸತ್ವಂತ್ ಸಿಂಗ್, “ಸರದಿಯಂತೆ ಮಹಿಳೆಯರು ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದರು. ಈ ತಂಡ ಕೂಡ ಪ್ರತಿಭಟನೆಯಲ್ಲಿ ಭಾಗವಹಿಸಿ ಪಂಜಾಬ್ ಗೆ ಮರಳುತ್ತಿದ್ದರು ಎಂದು ತಿಳಿಸಿದ್ದಾರೆ. ಲಖಿಂಪುರದಲ್ಲಿ ನಡೆದಂತೆ ಇದೊಂದು ವ್ಯವಸ್ಥಿತವಾದ ಹತ್ಯೆಯೇ ಅಥವಾ ಚಾಲಕನ ನಿರ್ಲಕ್ಷ್ಯದಿಂದ ಸಂಭವಿಸಿದ ಅಪಘಾತವೇ ಎಂಬುದು ಪೊಲೀಸರ ತನಿಖೆಯಿಂದಷ್ಟೇ ಬೆಳಕಿಗೆ ಬರಬೇಕಿದೆ. ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ತಮ್ಮ ಆಂದೋಲನದ ಭಾಗವಾಗಿ ರೈತರು ಕಳೆದ 11 ತಿಂಗಳಿಂದ ದೆಹಲಿಯ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.