ಬಂಟ್ವಾಳ: ಬಿಜೆಪಿ ಮುಖಂಡನ ಮೇಲೆ ಭಜರಂಗದಳ ಕಾರ್ಯಕರ್ತರಿಂದಲೇ ತಲವಾರು ದಾಳಿ ನಡೆಸಿ ಕೊಲೆ ಯತ್ನ ನಡೆದ ಘಟನೆ ಅ26ರ ತಡ ರಾತ್ರಿ ಬಂಟ್ವಾಳದಲ್ಲಿ ನಡೆದಿದ್ದು, ಘಟನೆಗೆ ಪೇಸ್ ಬುಕ್ ನಲ್ಲಿ ಉಂಟಾದ ವಿವಾದವೇ ಕಾರಣ ಎನ್ನಲಾಗಿದೆ.
ಬಂಟ್ವಾಳ ತಾಲೂಕು ಬಡಗ ಬೆಳ್ಳೂರು ನಿವಾಸಿ ಬಿಜೆಪಿ ಅಮ್ಟಾಡಿ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಬೆಳ್ಳೂರು ಹಲ್ಲೆಗೆ ಒಳಗಾಗಿದ್ದು, ಇವರ ಮೇಲೆ ಭಜರಂಗದಳ ಕಾರ್ಯಕರ್ತರು ಎನ್ನಲಾದ ನಿತಿನ್ ಬಡಗಬೆಳ್ಳೂರು, ನಿಶಾಂತ್ ಬಡಗಬೆಳ್ಳೂರು, ಪವನ್ ಕುಮ್ಡೇಲ್ ಹಾಗೂ ಇನ್ನಿತರರು ತಲವಾರು ಸಹಿತ ಮನೆಗೆ ನುಗ್ಗಿ ತಲವಾರಿನಿಂದ ಮಾರಣಾಂತಿಕ ದಾಳಿ ನಡೆಸಿ ಕೊಲೆ ಯತ್ನ ನಡೆಸಿದ್ದರು.
ಈ ವೇಳೆ ತಡೆಯಲು ಬಂದ ಪ್ರಕಾಶ್ ಅವರ ತಾಯಿ ಮತ್ತು ಅಣ್ಣನಿಗೆ ದುಷ್ಕರ್ಮಿಗಳು ಕೊಲೆ ಬೆದರಿಕೆ ಹಾಕಿದ್ದು, ಗಲಭೆಯ ಸಂದರ್ಭ ಜನ ಸೇರಿದ್ದನ್ನು ಕಂಡು ಆರೋಪಿಗಳು ಪರಾರಿ ಆಗಿದ್ದಾರೆ ಎನ್ನಲಾಗಿದೆ. ಮಾರಣಾಂತಿಕ ದಾಳಿಗೊಳಗಾದ ಪ್ರಕಾಶ್ ಬೆಳ್ಳೂರು ಬಂಟ್ವಾಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಫೇಸ್‌ಬುಕ್‌ನಲ್ಲಿ ನಡೆದ ಆರೋಪ ಪ್ರತ್ಯಾರೋಪಕ್ಕೆ ಸಂಬಂಧಿಸಿ ಪ್ರಕಾಶ್ ಬೆಳ್ಳೂರು ಸ್ಥಳೀಯ ದೇವಸ್ಥಾನವೊಂದಕ್ಕೆ ಆಣೆಪ್ರಮಾಣಕ್ಕೆ ಬರುವಂತೆ ಫೇಸ್ ಬುಕ್ ನಲ್ಲಿ ಫೋಸ್ಟ್ ಮಾಡಿದ್ದರು. ಫೇಸ್‌ಬುಕ್‌ನಲ್ಲಿ ಈ ವಿಷಯ ಹಾಕಿದ ವಿಚಾರದಲ್ಲಿ ನಿತಿನ್, ನಿಶಾಂತ್ ಮತ್ತು ರತ್ನಾಕರ ಕೋಟ್ಯಾನ್ ರವರು ಪ್ರಕಾಶ್ ಬೆಳ್ಳೂರುಗೆ ಕೊಲೆ ಬೆದರಿಕೆ ಹಾಕಿದ್ದು, ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಅದರ ಮುಂದುವರಿದ ಭಾಗವಾಗಿ ನಿನ್ನೆ ಸಂಜೆ 7.30 ಗಂಟೆಗೆ ಪ್ರಕಾಶ್ ಬೆಳ್ಳೂರು ಮನೆಯಲ್ಲಿದ್ದ ಸಂದರ್ಭ ನಿತಿನ್,
ನಿಶಾಂತ್ ಮತ್ತು 3 ಜನರು ಏಕಾಏಕಿ ಪ್ರಕಾಶ್ ಬೆಳ್ಳೂರು ಮನೆಗೆ ತಲವಾರು ಹಿಡಿದುಕೊಂಡು ನುಗ್ಗಿ ‘ನೀನು ನಮ್ಮ ಬಗ್ಗೆ ಫೇಸ್ ಬುಕ್ ನಲ್ಲಿ ಬಾರಿ ಫೋಸ್ಟ್ ಮಾಡುತ್ತೀಯಾ’ ಎಂದು ಆರೋಪಿ ನಿತಿನ್ ಕೈಯಲ್ಲಿದ್ದ ತಲವಾರು ಬೀಸಿದ್ದು, ಈ ವೇಳೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ತಲವಾರು ಪ್ರಕಾಶ್ ಬೆಳ್ಳೂರು ಎಡ ಕಿವಿಗೆ ತಾಗಿತ್ತು.
ಈ ವೇಳೆ ಆರೋಪಿ ನಿತಿನ್ ಜತೆಗಿದ್ದ ಕೆಲವರು ಪ್ರಕಾಶ್ ಬೆಳ್ಳೂರು ಅವರನ್ನು ನೆಲಕ್ಕೆ ತಳ್ಳಿ ಹಿಗ್ಗಾಮುಗ್ಗ ಥಳಿಸಿದ್ದರು. ಈ ವೇಳೆ ಪ್ರಕಾಶ್ ಬೆಳ್ಳೂರು ಜೋರಾಗಿ ಬೊಬ್ಬೆ ಹೊಡೆದಾಗ ಅವರ ಅಣ್ಣ ರವೀಂದ್ರ, ಲೀಲಾ ಮತ್ತು ಅತ್ತಿಗೆ ಗಲಾಟೆ ಬಿಡಿಸಲು ಬಂದಿದ್ದರು. ಈ ವೇಳೆ ನಿತಿನ್ ಮತ್ತು ತಂಡ ತಲವಾರು ತೋರಿಸಿ ಜೀವ ಬೆದರಿಕೆ ಹಾಕಿ ಓಡಿ ಹೋಗಿದ್ದಾರೆ.
ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ದಾಳಿಗೊಳಗಾದ ಪ್ರಕಾಶ್ ಬೆಳ್ಳೂರು ಬಂಟ್ವಾಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.