ನವದೆಹಲಿ: ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಗಗನದತ್ತ ಏರುತ್ತಲೇ ಇದೆ. ಇದರಿಂದ ಜನಸಾಮಾನ್ಯರ ಜೇಬಿಗೆ ಕತ್ತರಿ ಬೀಳುತ್ತಿದೆ. ವಿವಿಧ ರಾಜಕೀಯ ಪಕ್ಷಗಳ ಜೊತೆಗೆ ಜನಸಾಮಾನ್ಯರು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆಗೆ ಸರ್ಕಾರಕ್ಕೆ ಒತ್ತಾಯಿಸುತ್ತಿದ್ದಾರೆ. ಈಗ ಪ್ರಸಿದ್ಧ ಜಾಗತಿಕ ಹಣಕಾಸು ಕಂಪನಿ ಗೋಲ್ಡ್‌ಮನ್ ಸ್ಯಾಚ್ಸ್ ಮುಂಬರುವ ಸಮಯದಲ್ಲಿ, ದೇಶದಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 150 ರೂ. ತಲುಪಲಿದೆ ಎಂದು ಹೇಳಿದೆ.
ಮುಂದಿನ ವರ್ಷದ ವೇಳೆಗೆ ಬ್ರೆಂಟ್ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 110 ಡಾಲರ್ ಗೆ ಏರಬಹುದು ಎಂದು ಗೋಲ್ಡ್‌ಮನ್ ಸ್ಯಾಚ್ಸ್ ಹೇಳಿದೆ. ಪ್ರಸ್ತುತ,ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 85 ಡಾಲರ್ ನಷ್ಟಿದೆ. ಹೀಗಾಗಿ, ಕಚ್ಚಾ ತೈಲದ ಬೆಲೆಗಳು ಈಗಿನ ಬೆಲೆಗೆ ಹೋಲಿಸಿದರೆ ಮುಂದಿನ ವರ್ಷದ ವೇಳೆಗೆ ಶೇ.30 ರಷ್ಟು ಹೆಚ್ಚಾಗಬಹುದು. ಜಾಗತಿಕ ಬೇಡಿಕೆ-ಪೂರೈಕೆಯು ಅಸಮತೋಲನಗೊಂಡಿದೆ ಎಂದು ಗೋಲ್ಡ್‌ಮನ್ ಸ್ಯಾಚ್ಸ್‌ನ ತೈಲ ವಿಶ್ಲೇಷಕರು ಹೇಳಿದ್ದಾರೆ. ಈ ಸಮಯದಲ್ಲಿ ಕಚ್ಚಾ ಬೇಡಿಕೆಯು ಕೋವಿಡ್ ಪೂರ್ವದ ಮಟ್ಟವನ್ನು ತಲುಪಿದೆ. ಇದರಿಂದ ಮುಂದಿನ ವರ್ಷ ಕಚ್ಚಾತೈಲ ಬೆಲೆ ಏರಿಕೆಯಾಗುವ ನಿರೀಕ್ಷೆಯಿದೆ.
ಪೆಟ್ರೋಲ್, ಡೀಸೆಲ್ ಬೆಲೆ ಮೇಲೆ ದೊಡ್ಡ ಪರಿಣಾಮ
ಕಚ್ಚಾ ತೈಲ ಬೆಲೆಯ ಹೆಚ್ಚಳವು ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಗೋಲ್ಡ್‌ಮನ್ ಸ್ಯಾಚ್ಸ್ ಹೇಳುವಂತೆ ಕಚ್ಚಾ ತೈಲ ಬೆಲೆಯಲ್ಲಿ ಶೇಕಡಾ 30 ರಷ್ಟು ಹೆಚ್ಚಳವಾಗಿದೆ ಎಂದರೆ ಭಾರತದಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 150 ರೂ ಮತ್ತು ಡೀಸೆಲ್ ಬೆಲೆ ಲೀಟರ್‌ಗೆ 140 ರೂ. ಪ್ರಸ್ತುತ, ರಾಜಧಾನಿ ದೆಹಲಿಯಲ್ಲಿ 1 ಲೀಟರ್ ಪೆಟ್ರೋಲ್ ಬೆಲೆ 107.94 ರೂ ಮತ್ತು ಡೀಸೆಲ್ ಪ್ರತಿ ಲೀಟರ್‌ಗೆ 96.97 ರೂ. ಆಗಿದೆ.
ಜಾಗತಿಕ ಕಚ್ಚಾ ಬೇಡಿಕೆಯು ದಿನಕ್ಕೆ 99 ಮಿಲಿಯನ್ ಬ್ಯಾರೆಲ್‌ಗಳನ್ನು ದಾಟಿದೆ ಎಂದು ಗೋಲ್ಡ್‌ಮನ್ ಸ್ಯಾಚ್ಸ್ ಅಂದಾಜಿಸಿದೆ. ಶೀಘ್ರದಲ್ಲೇ ಇದು ದಿನಕ್ಕೆ 100 ಮಿಲಿಯನ್ ಬ್ಯಾರೆಲ್‌ಗಳ ಪೂರ್ವ ಕೋವಿಡ್ ಮಟ್ಟವನ್ನು ದಾಟಬಹುದು. ಏಷ್ಯಾ ದೇಶಗಳಲ್ಲಿ ಕೋವಿಡ್ ಪ್ರಮಾಣ ಚೇತರಿಕೆ ಕಾಣುತ್ತಿದ್ದು, ತೈಲೋತ್ಪನ್ನ ಬೇಡಿಕೆ ಏರುತ್ತಿರುವುದು ಕಾರಣ ಎನ್ನಲಾಗಿದೆ. ಒಟ್ಟಾರೆ ಜಾಗತಿಕ ಮಟ್ಟದಲ್ಲಿ ತೈಲದರ ಏರಿಕೆ ಹಾಗೂ ಸರ್ಕಾರಗಳ ತೆರಿಗೆ ವಸೂಲಾತಿಯಿಂದ ಜನಸಾಮಾನ್ಯರಿಗೆ ಬದುಕುವುದೇ ದುಸ್ತರವಾಗಿದೆ.