ಸುಳ್ಯ: ಸಚಿವ ಎಸ್.ಅಂಗಾರರ ತಾಲೂಕಿನಲ್ಲಿ ಪುಟಾಣಿ ಮಕ್ಕಳು ರಸ್ತೆ ದುರಸ್ಥಿ ಮಾಡಲು ಹಾರೆ ಹಿಡಿದಿದ್ದರೆ ಇತ್ತ ಸಚಿವರು ಹಾನಗಲ್ ಉಪ ಚುನಾವಣಾ ರೋಡ್‌ಶೋನಲ್ಲಿ ಬ್ಯುಸಿಯಾಗಿದ್ದಾರೆ. ಮಕ್ಕಳ ಪೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಹಿನ್ನಲೆ ಹಾಳಾದ ರಸ್ತೆಯ ಪ್ರದೇಶಕ್ಕೆ ಸುಳ್ಯ ಹಿರಿಯ ಸಿವಿಲ್ ನ್ಯಾಯಾಲಯ ನ್ಯಾಯಾಧೀಶ ಸೋಮಶೇಖರ್ ನೀಡಿ ಪರಿಶೀಲಿಸಿ, ರಸ್ತೆ ಸಮಸ್ಯೆ ನಿವಾರಿಸಬೇಕು ಎಂದು ಅದೇಶಿಸಿದ್ದಾರೆ. ಸಚಿವರ ಊರಲ್ಲಿ ಮಾತ್ರ ಯಾಕೆ ಹೀಗೆ? ಎಂದು ಸುಳ್ಯ ಕ್ಷೇತ್ರದ ಜನರು ಆಡಿಕೊಳ್ತಿದ್ದಾರೆ.
ಸುಳ್ಯ ತಾಲೂಕಿನ ಬೆಳ್ಳಾರೆಯ ಮಂಡೇಪು ಎಂಬಲ್ಲಿ ಹದಗೆಟ್ಟ ರಸ್ತೆಯನ್ನು ಸಂತೋಷ್ ಮತ್ತು ಕೇಶವ ಎಂಬುವರ ಮಕ್ಕಳಾದ ೨ನೇ ತರಗತಿಯ ವಲ್ಲೀಶ ರಾಮ ಮತ್ತು ತನ್ವಿ ಹಾರೆ ಹಿಡಿದು ಶ್ರಮದಾನ ಮಾಡಿದ್ದರು. ಈ ಮಕ್ಕಳ ಪೋಟೋ ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಹಿನ್ನಲೆ ಸ್ಥಳಕ್ಕೆ ಸುಳ್ಯ ಹಿರಿಯ ಸಿವಿಲ್ ಕೋರ್ಟ್ ನ್ಯಾಯಾಧೀಶ ಸೋಮಶೇಖರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೆ ರಸ್ತೆ ಪರಿಸ್ಥಿತಿಯನ್ನು ಅವಲೋಕಿಸಿದ ಅವರು, ವಿದ್ಯಾರ್ಥಿಗಳ ಕೈಯಲ್ಲಿ ಹಾರೆ ನೀಡಿದ್ದಕ್ಕಾಗಿ ಪೋಷಕರನ್ನು ಪ್ರಶ್ನಿಸಿದರು. ನಂತರ ಗ್ರಾಮ ಪಂಚಾಯತ್‌ಗೆ ಭೇಟಿ ನೀಡಿದ ನ್ಯಾಯಾಧೀಶರು ಪಂಚಾಯತ್ ಅಧ್ಯಕ್ಷರು ಮತ್ತು ಪಿಡಿಒ ಅವರನ್ನು ಪ್ರಶ್ನಿಸಿದರು. ಮಕ್ಕಳಿಂದ ಕೆಲಸ ಮಾಡಿಸಿದ ಪೋಷಕರು, ರಸ್ತೆಯ ದುರಸ್ತಿ ಮಾಡಿಸದ ಪಂಚಾಯತ್ ಅಧ್ಯಕ್ಷ ಮತ್ತು ಪಿಡಿಒ ಮೇಲೆ ಹಾಗೂ ಮಕ್ಕಳ ಬಗ್ಗೆ ನಿಗಾ ವಹಿಸದ ಶಾಲಾ ಶಿಕ್ಷಕರ ಮೇಲೆ ಎಫ್‌ಐಆರ್ ದಾಖಲಿಸುವಂತೆ ನ್ಯಾಯಾಧೀಶರು, ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಆಂಜನೇಯ ರೆಡ್ಡಿ ಅವರಿಗೆ ಸೂಚನೆ ನೀಡಿದರು.
ಭರವಸೆ ಕಳೆದುಕೊಂಡು ಮೊಗ್ರದಲ್ಲಿ ಗ್ರಾಮಸ್ಥರೇ ಸ್ವತಃ ನಿರ್ಮಿಸಿಕೊಂಡ ಗ್ರಾಮಸೇತು
ಈ ಸಂಬಂಧ ನ್ಯಾಯಾಧೀಶರ ಜೊತೆ ಮಾತನಾಡಿದ ಎಸ್.ಐ ಆಂಜನೇಯ ರೆಡ್ಡಿ ‘ಪ್ರಕರಣ ದಾಖಲಿಸುವುದು ಬೇಡ. ರಸ್ತೆ ದುರಸ್ತಿ ಮಾಡಿಸೋಣ’ ಎಂದು ಸಬ್ ಇನ್‌ಸ್ಪೆಕ್ಟರ್ ಹೇಳಿದಾಗ, ಅದಕ್ಕೆ ಒಪ್ಪಿದ ನ್ಯಾಯಾಧೀಶರು, ‘ತಕ್ಷಣ ದುರಸ್ತಿ ಮಾಡಿ, ಅದರ ಚಿತ್ರ ಮತ್ತು ವರದಿ ಸಲ್ಲಿಸಬೇಕು’ ಎಂದು ನಿರ್ದೇಶನ ನೀಡಿದರು.
ಇನ್ನೂ ಹೇಳಿ ಕೇಳಿ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಎಸ್. ಅಂಗಾರರು ಸತತವಾಗಿ ಆರು ಬಾರಿ ಶಾಸಕರಾಗಿದ್ದು, ಇದೀಗ ಸಚಿವರಾಗಿದ್ದಾರೆ. ಅಲ್ಲದೆ ದ.ಕ ಜಿಲ್ಲೆಯ ಉಸ್ತುವಾರಿ ಸಚಿವರು ಕೂಡ ಆಗಿದ್ದಾರೆ. ಇಷ್ಟೆಲ್ಲಾ ಅಧಿಕಾರವಿರುವಾಗ ಪ್ರತಿ ಗ್ರಾಮ ಪಂಚಾಯತ್‌ಗಳನ್ನು ಸಂಪರ್ಕಿಸಿ ಅಲ್ಲಿಯ ಸಮಸ್ಯೆಗಳ ಬಗ್ಗೆ ವರದಿ ಕೇಳಿ ಆ ಸಮಸ್ಯೆಗಳನ್ನು ಸರಿಮಾಡಲು ಬೇಕಾದ ವ್ಯವಸ್ಥೆ ಮಾಡುವುದು ಅವರ ಕರ್ತವ್ಯ ಅಲ್ಲವೇ?. ಇಂತಹ ಸಮಸ್ಯೆಗಳು ಒಂದಲ್ಲಾ ಎರಡಲ್ಲಾ ಪ್ರತಿ ಗ್ರಾಮದಲ್ಲೂ ಇದೆ. ಅದಲ್ಲದೆ ಈ ಹಿಂದೆ ಸ್ವತಃ ಅವರೇ ಹೋಗುತ್ತಿದ್ದ ಜೀಪ್ ರಸ್ತೆ ಸರಿ ಇಲ್ಲದೆ ಪರದಾಡಿದ್ದರು. ಬಳಿಕ ಸಚಿವರು ನಡೆದುಕೊಂಡು ಹೋದ ಪ್ರಸಂಗವೂ ನಡೆದಿತ್ತು
ಅದಲ್ಲದೇ ಮಳೆಗಾಲದಲ್ಲಿ ಜಾಲ್ಸೂರು ಸಮೀಪದ ಮರಸಂಕ ಎಂಬಲ್ಲಿ ರೋಗಿಯೊಬ್ವರನ್ನು ಹೊಳೆದಾಟಿಸಲು ಚಯರ್ ನಲ್ಲಿ ಹೊತ್ತುಕೊಂಡು ಹೋದ ಪ್ರಸಂಗವೂ ನಡೆದಿತ್ತು.
ಹೀಗಿರುವಾಗ ಇಂತಹ ಸಮಸ್ಯೆಗಳು ಮುಂದೆ ತಲೆ ಎತ್ತದ ಹಾಗೆ ಪರಿಹಾರ ನೀಡಬೇಕಿತ್ತು. ತಾಲೂಕಿನಲ್ಲಿ ರಸ್ತೆ, ನೆಟ್‌ವರ್ಕ್ ಸಮಸ್ಯೆಗಳು ಸೇರಿದಂತೆ ಒಂದರ ಹಿಂದೆ ಒಂದರಂತೆ ಸಮಸ್ಯೆಗಳು ಬಯಲಾಗುತ್ತಿದೆ.
ಇಷ್ಟೆಲ್ಲಾ ದ್ವಂದ್ವಗಳ ಮಧ್ಯೆ ಸಚಿವರು ಚುನಾವಣೆ ಪ್ರಚಾರದಲ್ಲಿ ಬ್ಯುಸಿಯಾಗಿರುವುದು ಮನೆಗೆ ಮಾರಿ ಊರಿಗೆ ಉಪಕಾರಿ ಎಂಬ ಗಾದೆಯಂತಾಗಿದೆ.
ಇದನ್ನೂ ಓದಿ