Ad Widget .

ಬಂಟ್ವಾಳ: ಗುತ್ತಿನ ಮನೆಯ ಗತ್ತು‌ ಕಸಿಯಿತೇ ದೈವಸ್ಥಾನ ಆಡಳಿತ ಮಂಡಳಿ| ಕಾಂಪ್ರಬೈಲು ಉಳ್ಳಾಲ್ತಿ ಭಂಡಾರವೀಗ ಹೈಕೋರ್ಟ್ ಅಂಗಳದಲ್ಲಿ..!?

Ad Widget . Ad Widget .

ಮಂಗಳೂರು: ಕರಾವಳಿಯಲ್ಲಿ ದೇವಸ್ಥಾನಗಳಷ್ಟೇ ಪ್ರಾಧಾನ್ಯತೆ ದೈವಸ್ಥಾನಗಳಿಗೂ ಇದೆ. ಇಲ್ಲಿನ ಜನ ದೈವ, ದೇವರುಗಳನ್ನು ಭಯ ಭಕ್ತಿಯಿಂದ ಆರಾಧನೆ ಮಾಡುತ್ತಾರೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ದ ದೈವಸ್ಥಾನವೊಂದರ ವಿವಾದ ಈಗ ಹೈಕೋರ್ಟ್‌ಗೆ ಅಂಗಳದಲ್ಲಿ ನಿಂತುಕೊಂಡಿದೆ.

Ad Widget . Ad Widget .

ಜಿಲ್ಲೆಯ ಬಂಟ್ವಾಳ ತಾಲೂಕಿನ ಕಾಂಪ್ರಬೈಲು ಉಳ್ಳಾಲ್ತಿ ಮತ್ತು ಅಜ್ವಾರ ದೈವಸ್ಥಾನದಲ್ಲಿ ಇದೀಗ ವ್ಯವಸ್ಥಾಪನಾ ಸಮಿತಿ ಮತ್ತು ಗುತ್ತಿನ ಮನೆಯವರ ನಡುವೆ ಜಟಾಪಟಿ ಶುರುವಾಗಿದೆ. ದೈವಗಳ ಮೊಗ ಮೂರ್ತಿ ಭಂಡಾರವನ್ನು ನೀಡುವ ವಿಚಾರದಲ್ಲಿನ ಭಿನ್ನಾಭಿಪ್ರಾಯ ತಾರಕಕ್ಕೇರಿದೆ.

ದೇಶದಲ್ಲಿ ಪ್ರಜಾಪ್ರಭುತ್ವ ಸರ್ಕಾರವಿದ್ದರೂ, ಆಚರಣೆಗಳ ವಿಚಾರಗಳಿಗೆ ಬಂದಾಗ ಕರಾವಳಿಯಲ್ಲಿ ಗುತ್ತು ಮನೆಗಳು ಅದರದ್ದೇ ಆದ ಪ್ರಾಮುಖ್ಯತೆಯನ್ನು ಹೊಂದಿವೆ. ಅದಕ್ಕೆ ಹಿನ್ನಲೆಯೂ ಇದೆ. ದೇಶದಲ್ಲಿ ಪ್ರಜಾಪ್ರಭುತ್ವ ಸರಕಾರದ ಕಲ್ಪನೆ ಬರುವ ಮೊದಲು ಕರಾವಳಿಯ ಉಭಯ ಜಿಲ್ಲೆಗಳು ಸೇರಿದಂತೆ ಕಾಸರಗೋಡು ಜಿಲ್ಲೆಗಳಲ್ಲಿ ಗುತ್ತು ಮನೆಗಳೇ ಸಣ್ಣಮಟ್ಟದ ಪ್ರಾಂತ್ಯ ಆಡಳಿತವನ್ನು ನಡೆಸುತ್ತಿತ್ತು.‌ ಈ ಗುತ್ತು ಮನೆಗಳು ಮಾಗಣೆ, ಸೀಮೆಯ ಮಟ್ಟದಲ್ಲಿ ಆಡಳಿತವನ್ನು ನಡೆಸುತ್ತಿದ್ದು, ಇವರ ಕೈಕೆಳಗಿರುವ ಜನಸಾಮಾನ್ಯರನ್ನು ಒಕ್ಕಲಿನವರು ಎಂದು ಹೇಳಲಾಗುತ್ತಿತ್ತು. ಅಲ್ಲದೆ ಈ ಮಾಗಣೆ, ಸೀಮೆಯೊಳಗಿನ ದೈವ ದೇವರುಗಳು ಗುತ್ತಿನ ಮನೆಯವರ ಆಡಳಿತಕ್ಕೆ ಹೊರತಾಗಿರಲಿಲ್ಲ. ಆದರೆ ದೇಶಕ್ಕೆ ಸ್ವಾತಂತ್ರ್ಯ ದೊರೆತು ಪ್ರಜಾಪ್ರಭುತ್ವ ಸರಕಾರವು ಬಂದ ಬಳಿಕ ಆಡಳಿತದಲ್ಲಿ ವ್ಯತ್ಯಾಸವಾದರೂ, ಆರಾಧನೆ, ಆಚರಣೆ ಮುಂತಾದ ವಿಚಾರಗಳಲ್ಲಿ ಗುತ್ತಿನ ಮನೆಯ ಪ್ರಾಮುಖ್ಯತೆ ಇನ್ನೂ ಉಳಿದುಕೊಂಡಿದೆ.

ಈಗಲೂ ದೈವಸ್ಥಾನಗಳ ಭಂಡಾರ ಅಂದರೆ ಮೊಗ ಮೂರ್ತಿ, ಆಭರಣ ಮತ್ತು ಪೂಜಾ ಪರಿಕರಗಳು ಈ ಗುತ್ತಿನ ಮನೆ ಅಥವಾ ಭಂಡಾರ ಗುತ್ತು, ಬೀಡುವಿನ ಮನೆಯಲ್ಲಿ ಇರುತ್ತದೆ. ಜಾತ್ರೆ ಉತ್ಸವಗಳ ಸಂದರ್ಭದಲ್ಲಿ ಆ ಮನೆಯಿಂದ ಮೊಗ ಮೂರ್ತಿ, ಆಭರಣ ಭಂಡಾರ ದೈವಸ್ಥಾನಕ್ಕೆ ತಗೊಂಡು ಹೋಗಿ ಉತ್ಸವ ಮುಗಿಸಿ ವಾಪಾಸು ತರುವ ಕ್ರಮ ಇದೆ. ಆದರೆ ಕಾಂಪ್ರಬೈಲು ಉಳ್ಳಾಲ್ತಿ ಮತ್ತು ಅಜ್ವಾರ‌ ದೈವಸ್ಥಾನದ ಆಡಳಿತ ಮಂಡಳಿ ತೆಗೆದುಕೊಂಡು ಹೋದ ಭಂಡಾರವನ್ನು ವಾಪಾಸು ತಂದಿಲ್ಲ. ಹೀಗಾಗಿ ಬಾಳ್ತಿಲ ಬೀಡುವಿನ ಪ್ರಮುಖರು ನ್ಯಾಯಕ್ಕಾಗಿ ಹೈಕೋರ್ಟ್, ಜಿಲ್ಲಾಡಳಿತದ ಮೊರೆ ಹೋಗಿದ್ದಾರೆ. ಹೈಕೋರ್ಟ್, ಜಿಲ್ಲಾಡಳಿತವು ಸಹ ಈ ಹಿಂದೆಯಂತೆ ನಡೆದುಕೊಂಡು ಬಂದ ಸಂಪ್ರದಾಯ ಪಾಲಿಸುವಂತೆ ಆದೇಶಿಸಿದೆ. ಆದರೆ ಇಲ್ಲಿ ಹೈಕೋರ್ಟ್ ತಡೆಯಾಜ್ಞೆಯನ್ನು ಸಹ ವ್ಯವಸ್ಥಾಪನ ಸಮಿತಿ ಧಿಕ್ಕರಿಸಿದೆ ಎಂದು ಬಾಳ್ತಿಲ ಬೀಡಿನವರು ಆರೋಪಿಸಿದ್ದಾರೆ. ನವರಾತ್ರಿ ಉತ್ಸವದ ಕೊನೆ ದಿನ ಭಂಡಾರವನ್ನು ನೀಡುವ ವಿಚಾರದಲ್ಲಿ ದೈವಸ್ಥಾನದ ಎದುರೇ ವ್ಯವಸ್ಥಾಪನ ಸಮಿತಿ ಹಾಗೂ ಬಾಳ್ತಿಲ ಬೀಡಿನವರ ನಡುವೆ ವಾಗ್ವಾದ ನಡೆದಿದೆ. ದೈವಸ್ಥಾನದ ಪೂಜೆಯ ಸಂದರ್ಭದಲ್ಲಿ ಬೀಡು ಮನೆಯವರು ಮತ್ತು ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ನಡುವೆ ಮಾತಿನ ಚಕಮಕಿ ನಡೆದಿದ್ದು, ಈ ಘಟನೆಗಳಿಗೆ ಆರ್‌ಎಸ್ಎಸ್ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಸಾಕ್ಷಿಯಾಗಿದ್ದಾರೆ ಮತ್ತು ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಜೊತೆ ಸೇರಿ ದೈವದ ಸಂಪ್ರದಾಯಕ್ಕೆ ಅಪಚಾರ ಎಸಗಿದ್ದಾರೆ ಅಂತಾ ಬಾಳ್ತಿಲ ಬೀಡು ವಂಶಸ್ತ ಬ್ರಿಜೇಶ್ ಜೈನ್ ಆರೋಪಿಸಿದ್ದಾರೆ.

ಒಂದೂವರೆ ತಿಂಗಳ ಹಿಂದಷ್ಟೇ ಇಲ್ಲಿ ನೂತನ ವ್ಯವಸ್ಥಾಪನ ಸಮಿತಿ ರಚನೆಯಾಗಿದೆ. ಈ ಸಮಿತಿ ಬಂದ ಮೇಲೆ ಈ ಜಟಾಪಟಿ ಆರಂಭವಾಗಿದೆ ಅಂತಾ ಸ್ಥಳೀಯರು ಆರೋಪ ಮಾಡಿದ್ದಾರೆ. ಒಟ್ಟಿನಲ್ಲಿ ದೈವಸ್ಥಾನದ ವಿಚಾರದಲ್ಲಿನ ಈ ಅಪರೂಪದ ವಿದ್ಯಮಾನ ಭಕ್ತ ಜನರಿಗೆ ಬೇಸರವನ್ನು ಉಂಟು ಮಾಡಿದೆ.

Leave a Comment

Your email address will not be published. Required fields are marked *