ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಶನಿವಾರ ಉತ್ತಮವಾಗಿ ಮಳೆ ಸುರಿದಿದ್ದು ಸಿಡಿಲಿಗೆ ಮಹಿಳೆ ಸೇರಿದಂತೆ ನಾಲ್ವರು ಮೃತಪಟ್ಟಿರುವ ಪ್ರತ್ಯೇಕ ಘಟನೆಗಳು ವರದಿಯಾಗಿವೆ.
ಹಳೇ ಮೈಸೂರಿನ ಕೆಲ ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡು ಕೃಷಿಗೂ ಅಪಾರ ನಷ್ಟವಾಗಿದೆ.
ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಕುದರಿಮೋತಿ ಗ್ರಾಮದ ರೈತ ಲಾಡೆನ್ಸಾಬ್(29), ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದ ಸಿದ್ದಪ್ಪ(40), ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಮೀಸೆತಿಮ್ಮನಹಳ್ಳಿಯ ಲೋಕೇಶ್ ನಾಯಕ (47)ಯಲ್ಲಾಪುರ ತಾಲೂಕಿನ ಕಿರವತ್ತಿಯ ಖಾರೇವಾಡದ ಜನಾಬಾಯಿ ಕಾನು ಶೆಳಕೆ (40) ಮೃತಪಟ್ಟವರು. ಇನ್ನು ಐವರು ಪ್ರತ್ಯೇಕ ಘಟನೆಗಳಲ್ಲಿ ಸಿಡಿಲು ಬಡಿದು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಗದಗ ಜಿಲ್ಲೆಯಲ್ಲಿ ಗುಡುಗು ಸಿಡಿಲಿನನೊಂದಿಗೆ ಭರ್ಜರಿ ಮಳೆಯಾಗಿದ್ದು ಡಂಬಳ ಹೋಬಳಿ ವ್ಯಾಪ್ತಿಯ ಡೋಣಿ ತಾಂಡಾದ ಹೊರವಲಯದಲ್ಲಿ ಸಿಡಿಲಿಗೆ 11 ಕುರಿಗಳು ಮೃತಪಟ್ಟಿವೆ.
ಚಾಮರಾಜನಗರ ಜಿಲ್ಲೆ ಹನೂರಿನ ತೋಮಿಯರ್ ಪಾಳ್ಯ ಮತ್ತು ಹಾಸನ ಜಿಲ್ಲೆ ಬೇಲೂರಿನ ಮಲ್ಲಿಕಾರ್ಜುನಪುರ ಗ್ರಾಮಗಳಲ್ಲಿ ಪ್ರತ್ಯೇಕ ಘಟನೆಗಳಲ್ಲಿ ಮನೆ ಕುಸಿದ ವೇಳೆ ಮನೆಯಲ್ಲಿದ್ದವರು ಹೊರಗೋಡಿ ಬಂದಿದ್ದರಿಂದ ಅದೃಷ್ಟವಶಾತ್ ಪ್ರಾಣಹಾನಿ ಸಂಭವಿಸಿಲ್ಲ.
ಕೊಪ್ಪಳ ಜಿಲ್ಲೆಯಾದ್ಯಂತ ಗುಡುಗು, ಸಿಡಿಲು ಸಮೇತ ಉತ್ತಮ ಮಳೆಯಾಗಿದ್ದು ಇರಕಲ್‌ಗಡ, ಕುಷ್ಟಗಿ ಸುತ್ತಮುತ್ತ ಸುಮಾರು ಅರ್ಧ ಗಂಟೆಗೂ ಅಧಿಕ ಕಾಲ ಆಲಿಕಲ್ಲು ಮಳೆಯಾಗಿದೆ. ಬಳ್ಳಾರಿ, ಹಾವೇರಿ, ಧಾರವಾಡ, ಕೋಲಾರ ಜಿಲ್ಲೆಗಳಲ್ಲೂ ಸಾಧಾರಣ ಮಳೆಯಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆಯಲ್ಲಿ ಶುಕ್ರವಾರ ಸಂಜೆ ಬಳಿಕ ಸುರಿದ ಭಾರೀ ಮಳೆಗೆ ರಾಜಾಕಾಲುವೆ ಉಕ್ಕಿ ಹರಿದು ಮನೆಗಳಿಗೆ ನೀರು ನುಗ್ಗಿದ್ದು ಒಂದು ಮನೆ ಕುಸಿದು ಬಿದ್ದಿದೆ. ಇಲ್ಲಿನ ಅಮಾನಿಬೈರಸಾಗರ ಕೆರೆ ಪ್ರಸಕ್ತ ವರ್ಷದಲ್ಲಿ ಇದು ಮೂರನೇ ಬಾರಿಗೆ ಕೋಡಿ ಹರಿದಿದ್ದು ಆಲುಗಡ್ಡೆ ಸೇರಿದಂತೆ ಕೆಲವೊಂದು ತೋಟಗಾರಿಕೆ ಬೆಳೆಗಳಿಗೆ ನಷ್ಟವಾಗಿದೆ. ರಾಮನಗರ ಜಿಲ್ಲೆಯ ಕುದೂರು ಹೋಬಳಿಯ ಚಿಕ್ಕಪುಟ್ಟ ಕೆರೆಗಳೆಲ್ಲ ಭರ್ತಿಯಾಗಿ ತೋಟಗಳಿಗೆ ನೀರು ನುಗ್ಗಿದೆ.