ಮಡಿಕೇರಿ: ಭಕ್ತರು ಕೊರಗಜ್ಜನ ಗುಡಿಗೆ ಅರ್ಪಿಸಿದ್ದ ಮದ್ಯವನ್ನು ಕದ್ದಾತನಿಗೆ ಕೊರಗಜ್ಜ ಶಿಕ್ಷೆ ನೀಡಿದ್ದಾನೆ ಮಾತುಗಳು ಕೊಡಗು ಜಿಲ್ಲೆಯ ಸುಂಟಿಕೊಪ್ಪ ಸಮೀಪದ ಕೆದಕಲ್ ಗ್ರಾಮದಲ್ಲಿ ಕೇಳಿಬಂದಿವೆ.
ವಾರದ ಹಿಂದೆ ವ್ಯಕ್ತಿಯೊಬ್ಬ ಕೊರಗಜ್ಜ ದೇವಸ್ಥಾನದಿಂದ ಮದ್ಯದ ಪ್ಯಾಕೆಟ್ ಕದ್ದಿದ್ದ. ಸಿಸಿಟಿವಿಯಲ್ಲಿ ಕೃತ್ಯ ಸೆರೆಯಾಗಿತ್ತು. ಭಕ್ತರು ಅರ್ಪಿಸಿದ್ದ ಮದ್ಯದ ಪ್ಯಾಕೆಟ್ ಕಾಣೆಯಾದ ಹಿನ್ನೆಲೆಯಲ್ಲಿ ಕದ್ದವನಿಗೆ ಶಿಕ್ಷೆ ಕೊಡುವಂತೆ ಅರ್ಚಕ ಉಮೇಶ್ ಕೊರಗಜ್ಜನಿಗೆ ಹರಕೆ ಕಟ್ಟಿದ್ದರು.
ಹರಕೆ ಕಟ್ಟಿಎರಡೇ ದಿನದಲ್ಲಿ ಮದ್ಯ ಕದ್ದಾತನ ಕಣ್ಣಿಗೆ ಹಾನಿಯಾಗಿದೆ, ಕಣ್ಣು ಕಪ್ಪಾಗಿ ಊತ ಬಂದು ಸಂಪೂರ್ಣ ಮುಚ್ಚಿ ಹೋಗಿದೆ ಎಂದು ಜನರು ಹೇಳಿದ್ದಾರೆ. ನಂತರ ಆತ ಕೊರಗಜ್ಜನ ಬಳಿ ಬಂದು ಹರಕೆ ನೀಡಿ ಕ್ಷಮೆ ಕೇಳಿದ್ದಾನೆ. ಕ್ಷಮಾಪಣೆ ಬಳಿಕ ಸುಧಾರಿಸಿಕೊಳ್ಳುತ್ತಿದ್ದಾನೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.
ದಕ್ಷಿಣ ಕನ್ನಡ, ಕೊಡಗು ಭಾಗದಲ್ಲಿ ಕೊರಗಜ್ಜನ ಪವಾಡ ಹೆಚ್ಚಿದ್ದು, ತಮ್ಮ ಇಷ್ಟಾರ್ಥಗಳು ಈಡೇರಲು ಭಕ್ತರು ಮದ್ಯ, ಚಕ್ಕುಲಿ ಮತ್ತು ಒಂದು ಕಟ್ಟು ಬೀಡಿ ಅಥವಾ ವೀಳ್ಯದೆಲೆ ಮತ್ತಿತರ ವಸ್ತುಗಳನ್ನು ಕೊರಗಜ್ಜನಿಗೆ ಹರಕೆಯಾಗಿ ಸಲ್ಲಿಸುವುದು ವಾಡಿಕೆ.
ಮತ್ತೊಂದು ದೈವಸ್ಥಾನದ ಹುಂಡಿಯಲ್ಲಿ ಕಾಂಡೋಮ್
ಮಂಗಳೂರು ಹೊರವಲಯದ ಕೊಂಡಾಣ ಬಂಟ ಪಿಲಿಚಾಮುಂಡಿ ದೈವಸ್ಥಾನದ ಹುಂಡಿಯಲ್ಲಿ ಕಾಂಡೋಮ್ ಪತ್ತೆಯಾಗಿದ್ದು, ಆಡಳಿತ ಮಂಡಳಿ ಇಂದು ಹುಂಡಿ ಒಡೆಯುವ ಸಂದರ್ಭದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ಮೂರು ತಿಂಗಳ ಹಿಂದಷ್ಟೇ ಕಾಣಿಕೆ ಹುಂಡಿ ತೆರೆಯಲಾಗಿತ್ತು. ಇಂದು ಮತ್ತೆ ಹುಂಡಿ ತೆರೆದಾಗ ಕಾಂಡೋಮ್ ಪತ್ತೆಯಾಗಿದೆ. ಈ ಹಿಂದೆ ಮಂಗಳೂರಿನ ಅನೇಕ ದೈವಸ್ಥಾನಗಳ ಹುಂಡಿಯಲ್ಲಿ ಕಾಂಡೋಮ್ ಪತ್ತೆಯಾಗಿತ್ತು. ಇದೀಗ ಈ ದೇವಾಲಯದ ಹುಂಡಿಯಲ್ಲಿಯೂ ಕಾಂಡೋಮ್ ಪತ್ತೆಯಾಗಿತ್ತು.