ಮಂಗಳೂರು: ಉದ್ಯಮಿ, ಬಿಜೆಪಿ ಹಿರಿಯ ನಾಯಕ ಸುಧೀರ್ ಘಾಟೆ(64) ಅವರು ಶುಕ್ರವಾರ ನಿಧನರಾದರು.
1992 ರಲ್ಲಿ ಜಾಹೀರಾತು ಸಂಸ್ಥೆ,’ ಮ್ಯಾಗ್ನಮ್ ಇಂಟರ್ ಗ್ರಾಫಿಕ್ಸ್’ ಕಟ್ಟಿ ಬೆಳೆಸಿದ್ದ ಸುಧೀರ್ ಘಾಟೆ ಮಂಗಳೂರಿನ ಪ್ರಸಿದ್ಧ ಉದ್ಯಮಿಗಳಲ್ಲಿ ಒಬ್ಬರಾಗಿದ್ದರು. ಇವರು ಸಂಸ್ಥೆಯಲ್ಲಿ 500 ಕ್ಕೂ ಹೆಚ್ಚು ಮಂದಿಗೆ ಉದ್ಯೋಗ ನೀಡಿದ್ದರು.
ಆರ್ ಎಸ್‌ಎಸ್ ಲೆಕ್ಕ ಪರಿಶೋಧಕರ ಕಚೇರಿಯಲ್ಲಿ ತನ್ನ ವೃತ್ತಿ ಜೀವನವನ್ನು ಆರಂಭಿಸಿದ್ದ ಸುಧೀರ್ ಘಾಟೆ 1995ರಲ್ಲಿ ರಾಜ್ಯ ಬಿಜೆಪಿಯ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ಪಕ್ಷ ಕಟ್ಟಿದ್ದರು.
ಬಿಎಂಎಸ್ ನ ಪ್ರಧಾನ ಕಾರ್ಯದರ್ಶಿಯಾಗಿದ್ದ ದಿವಂಗತ ಪ್ರಭಾಕರ್ ಘಾಟೆ- ಶಾರದಾ ಘಾಟೆ ದಂಪತಿ ಪುತ್ರರಾದ ಸುಧೀರ್ ಪಿಆರ್ ಐಎಸ್ ನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
ಅಟಲ್ ಬಿಹಾರಿ ವಾಜಪೇಯಿ, ಸುಷ್ಮಾ ಸ್ವರಾಜ್, ಲಾಲ್ ಕೃಷ್ಣ ಆಡ್ವಾಣಿ, ಮುರಳಿ ಮನೋಹರ್ ಜೋಷಿ ಸೇರಿ ರಾಜ್ಯದ ಹಿರಿಯ ಬಿಜೆಪಿ ನಾಯಕರ ಒಡನಾಟ ಸುಧೀರ್ ಘಾಟೆಯವರಿಗಿತ್ತು.
ಘಾಟೆ ಅವರು ಪತ್ನಿ, ಪುತ್ರ , ಪುತ್ರಿ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ. ಅಪಾರ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.