ಕೊಪ್ಪಳ: ರಾಹುಲ್ ಗಾಂಧಿ ಅವರ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ನೀಡಿರುವ ಹೇಳಿಕೆಯನ್ನು ವಿರೋಧಿಸಿ ಜಿಲ್ಲಾ ಮಹಿಳಾ ಕಾಂಗ್ರೆಸ್‌ನಿಂದ ನಳೀನ್ ಕುಮಾರ್ ಕಟೀಲ್‌ಗೆ ಅಂಚೆ ಮುಖಾಂತರ ಫಿನಾಯಿಲ್ ತಲುಪಿಸುವಂತೆ, ಇಂದು ಕೊಪ್ಪಳ ನಗರದ ಅಂಚೆ ಕಚೇರಿ ಮುಂಭಾಗದಲ್ಲಿ ಅರ್ಧ ಗಂಟೆ ಪ್ರತಿಭಟನಾರ್ಥ ಮೌನವಾಗಿ ಕುಳಿತು, ಸಂಸದ ನಳೀನ್ ಕುಮಾರ್‌ಗೆ ಫಿನಾಯಲ್ ಕಳಿಸುವ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್, ಕೊಪ್ಪಳ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜ್ಯೋತಿ ಎಂ. ಗೊಂಡಬಾಳ, ಸಂಸದ ನಳೀನ್‌ಕುಮಾರ್ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದು, ಡ್ರಗ್ಸ್ ಬಗ್ಗೆ ಸಾಕಷ್ಟು ಮಾಹಿತಿ ಹೊಂದಿದ್ದು, ದೇಶದ ಎಲ್ಲಾ ಉನ್ನತ ತನಿಖಾ ಸಂಸ್ಥೆಯವರು ಕೂಡಲೇ ನಳೀನ್‌ಕುಮಾರ್ ಅವರನ್ನು ಬಂಧಿಸಿ, ಅವರನ್ನು ವಿಧಿವಿಜ್ಞಾನ ಪ್ರಯೋಗಾಲಯದ ಮೂಲಕ ಮಾಹಿತಿ ಪಡೆಯಬೇಕು. ಅವರ ಹಿಂದೆ ದೊಡ್ಡ ಡ್ರಗ್ಸ್ ಮಾಫಿಯಾ ಗ್ಯಾಂಗ್ ಇರುವ ಅನುಮಾನ ದಟ್ಟವಾಗಿದೆ. ಅನುಮಾನ ಹೋಗಲಾಡಿಸಲು ರಾಜ್ಯದ ಮುಖ್ಯಮಂತ್ರಿ ಮತ್ತು ಪ್ರಧಾನಿ ಅವರು ತಾವೇ ಅದಕ್ಕೆ ಮುಂದಾಗಬೇಕು ಎಂದಿದ್ದಾರೆ.
ಈಚೆಗೆ ಗುಜರಾತ್ ಆದಾನಿ ಬಂದರಿನಲ್ಲಿ ಸಿಕ್ಕ ಕೋಟ್ಯಾಂತರ ಮೌಲ್ಯದ ಡ್ರಗ್ಸ್ ಪತ್ತೆಯಾದರೂ ಸಹ ಬಿಜೆಪಿ ಸರ್ಕಾರಗಳ ಮೌನ ನೋಡಿದರೆ ದೇಶದ ಜನರಿಗೆ ಬಿಜೆಪಿನೇ ಡ್ರಗ್ಸ್ ಕೊಡುತ್ತಿದೆಯಾ? ಎಂಬ ಅನುಮಾನ ಬರುತ್ತದೆ. ರಾಹುಲ್ ಗಾಂಧಿ ಅವರು ಅತ್ಯಂತ ಸರಳ ಸ್ವಭಾವದ ವಿದ್ಯಾವಂತ ನಾಯಕ, ಆಪಾದನೆ ಮಾಡುವಾಗ ಮೈ ಮೇಲೆ ಎಚ್ಚರ ಇರಬೇಕು. ನಶೆಯಲ್ಲಿ ಮಾತನಾಡುವದನ್ನು ಬಿಡಬೇಕು. ಬಿಟ್ಟಿ ಪ್ರಚಾರದ ತೆವಲನ್ನು ಬಿಟ್ಟು, ಸಂಸದರು ತಮ್ಮ ಕ್ಷೇತ್ರದಲ್ಲಿ ಕೆಲಸ ಮಾಡಿ ಪ್ರಚಾರ ಪಡೆಯಲಿ. ಕಾಂಗ್ರೆಸ್ ವಿರುದ್ಧ ಮಾತನಾಡುವ ನೈತಿಕತೆ ನಳೀನ್ ಚಾರಿತ್ರ್ಯದಲ್ಲಿಯೇ ಇಲ್ಲ. ಅದಕ್ಕಾಗಿ ಅವರು ತಮ್ಮ ಹೊಲಸು ನಾಲಿಗೆಯನ್ನು ತೊಳೆದುಕೊಳ್ಳಲಿ ಎಂದು ಅಂಚೆ ಸ್ಪೀಡ್ ಪೋಸ್ಟ್ ಮೂಲಕ ಮಹಿಳಾ ಕಾಂಗ್ರೆಸ್ ನಿಂದ ಉಚಿತವಾಗಿ ಫಿನಾಯಿಲ್ ಕಳಿಸಿದ್ದೇವೆ ಬಾಯಿ ತೊಳೆದುಕೊಂಡು ದೇಶದ ಜನರ ಹಾಗೂ ಸಂಸದ ರಾಹುಲ್ ಗಾಂಧಿ ಅವರ ಕ್ಷಮೆ ಕೇಳಿ ಅದರ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಹಾಕಿರಿ ಎಂದು ಆಗ್ರಹಿಸಿದರು.