ಅಕ್ರಮ ಮರಳುಗಾರಿಕೆ ತಪಾಸಣೆ| ಪೊಲೀಸರ ಮೇಲೆಯೇ ಲಾರಿ ಹತ್ತಿಸಲು ಯತ್ನ| ಆರೋಪಿಗಳು ಅರೆಸ್ಟ್

Ad Widget ... ..

ಮಂಗಳೂರು: ಅಕ್ರಮ ಮರಳುಗಾರಿಕೆಯ ತಪಾಸಣೆಯ ವೇಳೆ ದುಷ್ಕರ್ಮಿಗಳು ಪೊಲೀಸರ ಮೇಲೆಯೇ ಲಾರಿ ಹತ್ತಿಸಲು ಯತ್ನಿಸಿದ್ದಾರೆ ಎನ್ನಲಾದ ಘಟನೆ ಬುಧವಾರ ನಸುಕಿನ ಜಾವ ನಡೆದಿದೆ.

Ad Widget

ಟಿಪ್ಪರ್ ಲಾರಿ ಚಾಲಕ ಅಬ್ದುಲ್ ಇಸಾಕ್, ಆಲ್ಟೋ ಕಾರು ಚಾಲಕ ಮೊಯಿದ್ದೀನ್ ಅಪ್ಸರ್ ಎಂಬವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಆರೋಪಿಗಳ ವಿರುದ್ಧ ಎರಡು ಠಾಣೆಗಳಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪ್ರಕರಣ ವಿವರ: ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಎಂದು ಬಂದ ಮಾಹಿತಿಯ ಮೇರೆಗೆ ಮಂಗಳೂರು ಗ್ರಾಮಾಂತರ ಠಾಣೆ ಪೊಲೀಸರು ಬುಧವಾರ ನಸುಕಿನ ಜಾವ ಅಡ್ಯಾರ್ ಸಮೀಪದ ಕಾಲೇಜು ಬಳಿ ವಾಹನ ತಪಾಸಣೆ ನಡೆಸುತ್ತಿದ್ದರು. ನಸುಕಿನ ಜಾವ 2:30ರ ಸುಮಾರಿಗೆ ಅಡ್ಯಾರ್ ಸಮೀಪದ ನೇತ್ರಾವತಿ ನದಿ ಹಾಗೂ ಮರಳು ಧಕ್ಕೆ ಕಡೆಯಿಂದ ರಾಷ್ಟ್ರೀಯ ಹೆದ್ದಾರಿ-73 ಕಡೆಗೆ ಟಿಪ್ಪರ್ ಲಾರಿಯೊಂದು ಬರುತ್ತಿತ್ತು. ವಾಹನವನ್ನು ನಿಲ್ಲಿಸುವಂತೆ ಪೊಲೀಸರು ಸೂಚಿಸಿದ್ದಾರೆ.

ಈ ವೇಳೆಗೆ ಟಿಪ್ಪರ್ ಲಾರಿಯ ಹಿಂಬದಿಯಿಂದ ಆಲ್ಟೋ ಕಾರೊಂದು ಬಂದಿದ್ದು, ಅದರಲ್ಲಿನ ದುಷ್ಕರ್ಮಿಗಳು ಟಿಪ್ಪರ್ ಲಾರಿಯನ್ನು ನಿಲ್ಲಿಸದಂತೆ ಟಿಪ್ಪರ್ ಲಾರಿ ಚಾಲಕನಿಗೆ ತಿಳಿಸಿದರು. ಈ ಸಂದರ್ಭದಲ್ಲಿ ಸರಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿ, ಪೊಲೀಸ್ ಅಧಿಕಾರಿಗಳ ಸೂಚನೆ ಧಿಕ್ಕರಿಸಿ, ಫರಂಗಿಪೇಟೆ ಕಡೆಯ ರಸ್ತೆಯಲ್ಲಿ ವಾಹನ ಚಲಾಯಿಸಿಕೊಂಡು ತೆರಳಿದರು. ಈ ವಾಹನಗಳನ್ನು ಬೆನ್ನಟ್ಟಿದರೂ ನಿಲ್ಲಿಸದೇ ವೇಗವಾಗಿ ಚಲಾಯಿಸಿಕೊಂಡು ಹೋಗಿ ತಪ್ಪಿಸಿಕೊಂಡಿದ್ದರು.

ಈ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಟ್ವಾಳ ಗ್ರಾಮಾಂತರ ಠಾಣೆಯ ಪೊಲೀಸರು ಸಹಕಾರದೊಂದಿಗೆ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಪ್ರಕರಣದಲ್ಲಿ ಟಿಪ್ಪರ್ ಲಾರಿ, ಕಾರನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Comment

Your email address will not be published. Required fields are marked *