ಮಂಗಳೂರು: ಒಂದು ಕಾಲದಲ್ಲಿ ಮದ್ಯವ್ಯಸನಿಯಾಗಿದ್ದ 21 ವರ್ಷದ ಲಂಗೂರ್ ಮಂಗಳೂರಿನ ಪಿಲಿಕುಳ ನೈಸರ್ಗಿಕ ಧಾಮದಲ್ಲಿ ಸಾವನ್ನಪ್ಪಿದೆ. ಮಂಗಳೂರಿನ ಈ ಪಾರ್ಕ್ಗೆ ಕರೆತರಲಾಗಿದ್ದ ಮೊದಲ ಲಂಗೂರ್ ಇದಾಗಿತ್ತು. ರಾಜು ಎಂಬ ಈ ಲಂಗೂರ್ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು ಕಿಡ್ನಿ ಹಾಗೂ ಲಿವರ್ ಸಂಬಂಧಿ ಸಮಸ್ಯೆಯಿಂದ ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ.
ಪಡುಬಿದ್ರಿಯ ಬಾರ್ ಒಂದರ ಸಮೀಪ ಅನಾರೋಗ್ಯದಿಂದ ಬಳಲುತ್ತಿದ್ದ ಈ ಲಂಗೂರ್ ನ್ನು 2005ರಲ್ಲಿ ರಕ್ಷಿಸಲಾಗಿತ್ತು.
ಬಾರ್ ಸಮೀಪವೇ ಈ ಲಂಗೂರ್ ಇರುತ್ತಿದ್ದರಿಂದ ಇದಕ್ಕೆ ಮದ್ಯಪಾನಿಗಳು ಮದ್ಯವನ್ನು ನೀಡುತ್ತಿದ್ದರು. ಇದಾದ ಬಳಿಕ ಲಂಗೂರ್ ಗೆ ಮದ್ಯ ಕುಡಿಯುವುದು ಅಭ್ಯಾಸವಾಗಿ ಹೋಗಿತ್ತು. 2005ರಲ್ಲಿ ನಮಗೆ ಬಾರ್ ಮಾಲೀಕರು ಕರೆ ಮಾಡಿ ಕೋತಿಯ ಆರೋಗ್ಯ ಹದಗೆಟ್ಟಿದೆ ಎಂದು ಮಾಹಿತಿ ನೀಡಿದ್ದರು ಎಂದು ಪಿಲಿಕುಳ ನೈಸರ್ಗಿಕ ಧಾಮದ ನಿರ್ದೇಶಕ ಹೆಚ್ಜೆ ಭಂಡಾರಿ ತಿಳಿಸಿದ್ದಾರೆ.
ನಿಸರ್ಗಧಾಮದಲ್ಲಿ ರಾಜು ಆಹಾರ ಸೇವನೆಯನ್ನು ನಿಲ್ಲಿಸಿದ್ದನು. ಅಲ್ಲದೇ ಒಂದು ತಿಂಗಳುಗಳ ಕಾಲ ರಾಜುಗೆ ಸ್ವಲ್ಪ ಮದ್ಯವನ್ನು ನೀಡಲಾಯ್ತು. ರಾಜು ಆರೋಗ್ಯದಲ್ಲಿ ಚೇತರಿಕೆ ಕಂಡ ಬಳಿಕ ಮದ್ಯ ನೀಡುವುದನ್ನು ನಿಲ್ಲಿಸಲಾಗಿತ್ತು.
ಇದಾದ ಬಳಿಕ ತರಕಾರಿ, ಹಣ್ಣು ಹಾಗೂ ಹಸಿರು ಪದಾರ್ಥಗಳನ್ನೇ ಸೇವಿಸುತ್ತಿದ್ದ ಲಂಗೂರ್ ನಿಸರ್ಗಧಾಮದ ಪ್ರಮುಖ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು ಎಂದು ಭಂಡಾರಿ ಹೇಳಿದ್ದಾರೆ.