ಡೆಹ್ರಾಡೂನ್: ಉತ್ತರಾಖಂಡದಲ್ಲಿ ಭಾರೀ ಮಳೆಯಿಂದಾಗಿ, ಹಲವು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಈ ಮಧ್ಯೆ, ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿಯೊಂದಿಗೆ ಚರ್ಚಿಸಿದ್ದು, ರಾಜ್ಯದಲ್ಲಿ ಭಾರೀ ಮಳೆಯಿಂದಾಗಿ ಉದ್ಭವಿಸಿರುವ ಪರಿಸ್ಥಿತಿಯನ್ನು ಪ್ರಧಾನಿ ಅವಲೋಕಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸೋಮವಾರ ರಾತ್ರಿಯಿಂದ ನೈನಿತಾಲ್ ಮತ್ತು ಕೌಶಾನಿಯಿಂದ ಮುನ್ಸಿವರೆಗೆ ಹೋಗುವ ದಾರಿಯಲ್ಲಿ ಹಲವಾರು ಭೂಕುಸಿತಗಳು ಸಂಭವಿಸಿವೆ. ಕೌಶನಿಯ ವಿವಿಧ ಸ್ಥಳಗಳಲ್ಲಿ ಸುಮಾರು 500 ಪ್ರವಾಸಿಗರು ಸಿಲುಕಿಕೊಂಡಿದ್ದಾರೆ. ಅಲ್ಮೋರಾ ಜಿಲ್ಲೆಯಲ್ಲಿ ಭಾರೀ ಮಳೆ ಅವಾಂತರ ಸೃಷ್ಟಿಸುತ್ತಿದೆ. ಕಳೆದ 36 ಗಂಟೆಗಳಿಂದ ನಿರಂತರ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಮಳೆಯಿಂದಾಗಿ ಎರಡು ಪ್ರತ್ಯೇಕ ಘಟನೆಗಳಲ್ಲಿ, ಮೂವರು ಮಕ್ಕಳು ಅವಶೇಷಗಳ ಅಡಿಯಲ್ಲಿ ಹುದುಗಿ ಸಾವನ್ನಪ್ಪಿದ್ದಾರೆ.
ರಾಮನಗರ-ರಾಣಿಖೇತ್ ಮಾರ್ಗದಲ್ಲಿರುವ ಲೆಮನ್ ಟ್ರೀ ರೆಸಾರ್ಟ್ ಜಲಾವೃತಗೊಂಡಿದೆ. ಸುಮಾರು 100 ಜನರು ಇಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ, ಅವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗುತ್ತಿದೆ. ಕೋಸಿ ನದಿಯಲ್ಲಿ ನೀರಿನ ಮಟ್ಟ ಏರಿಕೆಯಿಂದಾಗಿ, ರೆಸಾರ್ಟ್ ಜಲಾವೃತವಾಗಿದೆ. ರೆಸಾರ್ಟ್‌ಗೆ ತೆರಳುವ ದಾರಿಯೂ ಮುಳುಗಿದೆ.