ತಿರುವನಂತಪುರ: ಕೇರಳದಲ್ಲಿ ವಾಡಿಕೆಗಿಂತ ಶೇಕಡ 74ರಷ್ಟು ಅಧಿಕ ಮಳೆ ಬಿದ್ದ ಪರಿಣಾಮವಾಗಿ ಭೀಕರ ಪ್ರವಾಹ ಪರಿಸ್ಥಿತಿ ಉದ್ಭವಿಸಿದ್ದು, ಮಳೆ ಸಂಬಂಧಿ ದುರಂತಗಳಿಗೆ 18 ಮಂದಿ ಬಲಿಯಾಗಿದ್ದಾರೆ. 20ಕ್ಕೂ ಹೆಚ್ಚು ಮಂದಿ ಕಾಣೆಯಾಗಿದ್ದಾರೆ.
ಮಧ್ಯ ಹಾಗೂ ದಕ್ಷಿಣ ಕೇರಳದಲ್ಲಿ ಹಲವೆಡೆ ಭೀಕರ ಪ್ರವಾಹ ಹಾಗೂ ಭೂಕುಸಿತದ ಘಟನೆಗಳು ವರದಿಯಾಗಿವೆ. ಈ ಹಿನ್ನೆಲೆಯಲ್ಲಿ ಪರಿಹಾರ ಕಾರ್ಯಗಳಿಗಾಗಿ ಸೇನೆ ಹಾಗೂ ನೌಕಾಪಡೆಯ ನೆರವು ಕೋರಲಾಗಿದೆ.
ಹವಾಮಾನ ತಜ್ಞರು ತೀವ್ರ ಮಳೆಯನ್ನು “ಮಿನಿ ಮೇಘ ಸ್ಫೋಟ” ಎಂದು ಬಣ್ಣಿಸಿದ್ದಾರೆ. ಹಲವು ಕಡೆಗಳಲ್ಲಿ ಕೇವಲ ಎರಡು ಗಂಟೆ ಅವಧಿಯಲ್ಲಿ 5 ಸೆಂಟಿಮೀಟರ್‌ಗಿಂತಲೂ ಅಧಿಕ ಮಳೆ ಬಿದ್ದಿದೆ. ಪೀರ್ ಮೇಡ್‌ನಲ್ಲಿ ಅತ್ಯಧಿಕ ಅಂದರೆ 24 ಸೆಂಟಿಮೀಟರ್ ಮಳೆ ಬಿದ್ದಿದ್ದು, ಚೆರುತೋನಿ, ಚಲಕುಡಿ ಮತ್ತು ಪೂಂಜಾರ್‌ನಲ್ಲಿ 14 ಸೆಂಟಿಮೀಟರ್ ಮಳೆಯಾಗಿದೆ.
ಪ್ರವಾಹಪೀಡಿತ ಕೇಂದ್ರ ಹಾಗೂ ದಕ್ಷಿಣ ಕೇರಳದಲ್ಲಿ ಪರಿಹಾರ ಕಾರ್ಯಗಳಿಗಾಗಿ ರಾಷ್ಟ್ರೀಯ ವಿಕೋಪ ಸ್ಪಂದನೆ ಪಡೆ (ಎನ್‌ಡಿಆರ್‌ಎಫ್)ಯ 11 ತುಕಡಿಗಳನ್ನು ನಿಯೋಜಿಸಲಾಗುತ್ತಿದೆ ಎಂದು ಎನ್‌ಡಿಆರ್‌ಎಫ್ ನಿರ್ದೇಶಕ ಜನರಲ್ ಎಸ್.ಎನ್.ಪ್ರಧಾನ್ ಹೇಳಿದ್ದಾರೆ.
ಅಕ್ಟೋಬರ್ 7 ರಿಂದ 13ರ ಅವಧಿಯಲ್ಲಿ ಕೇರಳದಲ್ಲಿ ವಾಡಿಕೆ ಮಳೆಗಿಂತ ಶೇಕಡ 166ರಷ್ಟು ಅಧಿಕ ಮಳೆ ಬಿದ್ದಿದೆ ಎಂದು ಹವಾಮಾನ ತಜ್ಞರು ಹೇಳಿದ್ದು, ಇದು ಮಿನಿ ಮೇಘ ಸ್ಫೋಟ ಎಂದು ಹೇಳಿದ್ದಾರೆ. ಪರಿಸ್ಥಿತಿ ತೀರಾ ಕಳವಳಕಾರಿಯಾಗಿದ್ದು, ಸುಧಾರಿಸುವ ವಿಶ್ವಾಸವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವ್ಯಕ್ತಪಡಿಸಿದ್ದಾರೆ.
ಕೊಟ್ಟಾಯಂ ಮತ್ತು ಇಡುಕ್ಕಿ ಜಿಲ್ಲೆಗಳಲ್ಲಿ ಶನಿವಾರ ಪ್ರವಾಹದಿಂದಾಗಿ ಒಂದೇ ಕುಟುಂಬದ ಮೂರು ಮಂದಿ ಸೇರಿದಂತೆ ಐದು ಮಂದಿ ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ.
ಕೊಟ್ಟಾಯಂ ಜಿಲ್ಲೆಯ ಪ್ಲಾಪಲ್ಲಿ ಎಂಬಲ್ಲಿ ಭೀಕರ ಭೂಕುಸಿತ ಸಂಭವಿಸಿ ಮೂರು ಮನೆಗಳು ಹಾಗು ಒಂದು ಅಂಗಡಿ ನೆಲಸಮವಾಗಿದೆ. ಘಟನೆ ನಡೆದ ಸಂದರ್ಭದಲ್ಲಿ 10 ಮಂದಿ ಆ ಸ್ಥಳದಲ್ಲಿದ್ದರು ಎನ್ನಲಾಗಿದ್ದು, ಈ ಪ್ರದೇಶ ಇತರೆಡೆಯ ಜತೆ ಸಂಪರ್ಕ ಕಡಿದುಕೊಂಡಿದೆ. ಇದರಿಂದಾಗಿ ಪರಿಹಾರ ಮತ್ತು ಶೋಧ ಕಾರ್ಯಾಚರಣೆಗೆ ಕಷ್ಟವಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.