Ad Widget .

‘ಆಲಯಕ್ಕೆ ಹೋಗ್ಬೇಡಿ, ದೇವರಿಗೆ ಹೂ ಸಮರ್ಪಿಸಬೇಡಿ’ – ವಿವಾದಕ್ಕೆ ಕಾರಣವಾದ ಎರಡನೇ ತರಗತಿ ಪಠ್ಯ ಪುಸ್ತಕ| ಆಕ್ರೋಶ ವ್ಯಕ್ತಪಡಿಸಿದ ಹಿಂದೂ ಪರ ಸಂಘಟನೆಗಳು

ಪುತ್ತೂರು: ರಾಜ್ಯ ಶಿಕ್ಷಣ ಇಲಾಖೆ ಹೊರತಂದಿರುವ ಎರಡನೇ ತರಗತಿಯ ಇಂಗ್ಲಿಷ್ ಪಠ್ಯ ಪುಸ್ತಕ ಇದೀಗ ವಿವಾದಕ್ಕೆ ಕಾರಣವಾಗಿದ್ದು, ಪುಸ್ತಕದಲ್ಲಿರುವ ರವೀಂದ್ರನಾಥ ಟಾಗೋರ್ ಬರೆದಿರುವ ಕವಿತೆಯಲ್ಲಿನ ಅಂಶಗಳು ಹಿಂದೂ ಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.

Ad Widget . Ad Widget .

“ಗೋ ನಾಟ್ ಟು ಟೆಂಪಲ್” ಎನ್ನುವ ಶೀರ್ಷಿಕೆಯಡಿ ಇರುವ ಈ ಕವಿತೆಯಲ್ಲಿ ಎಳೆಯ ಮನಸ್ಸುಗಳಲ್ಲಿ ಹಿಂದೂ ಧರ್ಮ ಹಾಗೂ ಅದರ ಆಚರಣೆಗಳ ಬಗ್ಗೆ ಅವಹೇಳನಕಾರಿಯಾಗಿ ಬಿಂಬಿಸಲಾಗಿದೆ ಎಂದು ಸಂಘಟನೆಗಳು ಆರೋಪಿಸಿವೆ. ಈ ಕವಿತೆಯಲ್ಲಿ ದೇವಸ್ಥಾನಕ್ಕೆ ಹೋಗೋದು ಬೇಡ, ದೇವರಿಗೆ ಹೂವು ಅರ್ಪಿಸೋದು ಬೇಡ, ದೇವರ ಮುಂದೆ ಮಂಡಿಯೂರಿ ಪ್ರಾರ್ಥಿಸುವ ಬೇಡ. ಇವುಗಳ ಬದಲು ಅಗತ್ಯ ಇರುವವರಿಗೆ ನೆರವಾಗೋಣ ಮೊದಲಾದ ವಿಚಾರಗಳನ್ನು ಹೇಳಲಾಗಿದೆ. ಪ್ರೌಢಾವಸ್ಥೆಯಲ್ಲಿರುವ ಮಕ್ಕಳಿಗೆ ತಿಳಿಸಬೇಕಾದ ಈ ರೀತಿಯ ವಿಚಾರಗಳನ್ನು ಎರಡನೇ ತರಗತಿಯ ಮಕ್ಕಳ ಮೇಲೆ ಹೇರುವಂತಹ ಪ್ರಯತ್ನ ಈ ಕವಿತೆಯ ಮೂಲಕ ನಡೆದಿದೆ ಎಂದು ಮಕ್ಕಳ ಪೋಷಕರೂ ಆರೋಪಿಸಿದ್ದಾರೆ.

Ad Widget . Ad Widget .

ಸಾಹಿತಿ ಬರಗೂರು ರಾಮಚಂದ್ರಪ್ಪ ಅಧ್ಯಕ್ಷತೆಯ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ಮೂಲಕ ಈ ಪಠ್ಯ ಪುಸ್ತಕವನ್ನು ಹೊರತರಲಾಗಿದೆ. ಈ ಪುಸ್ತಕವನ್ನು ಹೊರತಂದು ಹಲವು ದಿನಗಳು ಕಳೆದಿದ್ದು, ಇದೀಗ ಈ ಪಠ್ಯ ಪುಸ್ತಕದ ನಿರ್ದಿಷ್ಟ ಪೇಜ್ ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗಲಾರಂಭಿಸಿದೆ. ಈ ಬಗ್ಗೆ ಎಚ್ಚೆತ್ತುಕೊಂಡಿರುವ ಹಿಂದೂ ಸಂಘಟನೆಗಳು, ಅದರಲ್ಲೂ ಭಜರಂಗದಳ ಈ ವಿಷಯವನ್ನು ಅತ್ಯಂತ ಗಂಭೀರವಾಗಿ ತೆಗೆದುಕೊಂಡಿದ್ದು, ಸರಕಾರ ಹಾಗು ಶಿಕ್ಷಣ ಇಲಾಖೆ ತಕ್ಷಣವೇ ಈ ಕವಿತೆಯನ್ನು ಪುಸ್ತಕದಿಂದ ತೆಗೆದುಹಾಕಬೇಕೆಂದು ಆಗ್ರಹಿಸಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಭಜರಂಗದಳದ ಪ್ರಾಂತ್ಯ ಸಂಚಾಲಕ ಮುರಳೀಕೃಷ್ಣ ಹಸಂತಡ್ಕ ಕೇವಲ ಹಿಂದೂ ಧರ್ಮವನ್ನು ಕೇಂದ್ರೀಕರಿಸಿ ಧರ್ಮವನ್ನು ಹೀನಾಯವಾಗಿ ಬಿಂಬಿಸುವ ಇಂಥಹ ಪ್ರಕ್ರಿಯೆಗಳು ನಿರಂತರವಾಗಿ ನಡೆಯುತ್ತಿದೆ. ಇದೀಗ ಎಳೆಯ ಮಕ್ಕಳ ಪಠ್ಯದಲ್ಲೂ ಹಿಂದೂ ಧರ್ಮ ಹಾಗೂ ಆಚರಣೆಯ ಬಗ್ಗೆ ನಿರ್ಲಕ್ಷ್ಯ ತೋರಿಸುವಂತಹ ಪಠ್ಯಗಳನ್ನು ಅಳವಡಿಸುವಂತಹ ವ್ಯವಸ್ಥೆಗಳು ನಡೆಯುತ್ತಿದೆ. ರಾಜ್ಯ ಸರಕಾರ ಈ ಬಗ್ಗೆ ಸೂಕ್ತ ಗಮನಹರಿಸಬೇಕು.ಶಿಕ್ಷ ಸಚಿವರು ವಿವಾದಿತ ಕವಿತೆಯನ್ನು ತಕ್ಷಣವೇ ಪಠ್ಯದಿಂದ ತೆಗೆಯುವ ಕೆಲಸ ಮಾಡಬೇಕು. ಇಲ್ಲದೇ ಹೋದಲ್ಲಿ ಭಜರಂಗದಳ ರಾಜ್ಯದಾದ್ಯಂತ ಈ ವಿಚಾರವಾಗಿ ಹೋರಾಟ ಕೈಗೆತ್ತಿಕೊಳ್ಳಲಿದೆ ಎಂದು ಎಚ್ಚರಿಸಿದ್ದಾರೆ.

ಕೇವಲ ಹಿಂದೂ ಸಂಘಟನೆಗಳು ಮಾತ್ರವಲ್ಲದೆ ಮಕ್ಕಳ ಪೋಷಕರೂ ಇಂಥಹ ಪಠ್ಯಗಳನ್ನು ಮಕ್ಕಳಿಗೆ ಕಲಿಸುವುದಕ್ಕೆ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಎಳೆಯ ಮಕ್ಕಳಿಗೆ ಇಂಥ ವಿಚಾರಗಳ ಅಗತ್ಯವಿಲ್ಲ. ಪ್ರೌಢಾವಸ್ಥೆಯಲ್ಲಿ ಕಲಿಸುವಂತಹ ವಿಚಾರವನ್ನು ಮಕ್ಕಳ ಮನಸ್ಸಿನಲ್ಲಿ ಹೇರುವ ಪ್ರಯತ್ನಗಳು ನಡೆಯಬಾರದು ಎನ್ನುತ್ತಾರೆ ಎರಡನೇ ತರಗತಿಯಲ್ಲಿ ಕಲಿಯುತ್ತಿರುವ ಮಗುವಿನ ಪೋಷಕರಾದ ಸುನಿಲ್. ಈ ವಿಚಾರ ಇದೀಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೂ ಗ್ರಾಸವಾಗಿದ್ದು, ಹಿಂದೂ ಧರ್ಮದ ಬಗ್ಗೆ ತತ್ಸಾರ ಮೂಡಿಸುವ ಪ್ರಕ್ರಿಯೆ ಶಾಲೆಗಳ ಮೂಲಕವೇ ನಡೆಯುತ್ತಿರುವುದಕ್ಕೆ ಭಾರೀ ಆಕ್ರೋಶವೂ ಕೇಳಿ ಬರಲಾರಂಭಿಸಿದೆ.

Leave a Comment

Your email address will not be published. Required fields are marked *