Ad Widget .

ಹಾವು ಕಚ್ಚಿಸಿ ಕೊಲೆಗೈದ ಪತಿಗೆ ಜೀವಾವಧಿ ಶಿಕ್ಷೆಯ ತೀರ್ಪು| ಅತಿ ಅಪರೂಪದ ಪ್ರಕರಣವೆಂದ ಕೋರ್ಟ್|

Ad Widget . Ad Widget .

ಕೊಲ್ಲಂ: ತನ್ನ ಪತ್ನಿಗೆ ವಿಷಪೂರಿತ ನಾಗರ ಹಾವು ಕಚ್ಚಿಸಿ ಕೊಲೆ ಮಾಡಿದ ಆರೋಪ ಸಾಬೀತಾದ ಹಿನ್ನಲೆಯಲ್ಲಿ ಸೂರಜ್ ಎಸ್ ಕುಮಾರ್‌ಗೆ ಬುಧವಾರ ಕೇರಳದ ಕೊಲ್ಲಂ ಹೆಚ್ಚುವರಿ ಸೆಷನ್ಸ್‌‌ ನ್ಯಾಯಾಲಯವು ಎರಡು ಬಾರಿ ಜೀವಾವಧಿ ಶಿಕ್ಷೆ ವಿಧಿಸಿದೆ. ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದ ನ್ಯಾಯಾಧೀಶ ಎಂ.ಮನೋಜ್ ಅವರು ಈ ಪ್ರಕರಣವು ‘ಅಪರೂಪದಲ್ಲಿ ಅಪರೂಪ’ ಎಂದು ಹೇಳಿದ್ದಾರೆ.

Ad Widget . Ad Widget .

ಆರೋಪಿಗೆ ಮರಣ ದಂಡನೆ ನೀಡಬೇಕು ಎಂದು ಉತ್ರಾ ಪರವಾಗಿ ವಾದಿಸಿದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಜಿ ಮೋಹನರಾಜ್ ನ್ಯಾಯಾಲಯಕ್ಕೆ ವಿನಂತಿಸಿದ್ದರು. ಆದರೆ ಆರೋಪಿಯ ವಯಸ್ಸು ಮತ್ತು ಕ್ರಿಮಿನಲ್ ಹಿನ್ನಲೆ ಇಲ್ಲದೆ ಇರುವುದನ್ನು ಗಮನಿಸಿದ ನ್ಯಾಯಾಲಯವು ಜೀವಾವಧಿ ಶಿಕ್ಷೆಯನ್ನು ನೀಡಿ ತೀರ್ಪಿತ್ತಿದೆ.

ಹಾವು ಬಳಸಿ ಕೊಲೆ ಮಾಡಿದಂತಹ ಈ ಪ್ರಕರಣವು ಇಡೀ ದೇಶದಲ್ಲೆ ಮೊದಲು ಎಂದು ಲೈವ್ ಲಾ ವರದಿ ಮಾಡಿದೆ. ಇದೇ ರೀತಿ ಎರಡು ಪ್ರಕರಣಗಳು ಈ ಹಿಂದೆ ವರದಿಯಾಗಿತ್ತಾದರೂ, ಅದು ಸಾಬೀತಾಗದ ಕಾರಣ ಆರೋಪಿಗಳನ್ನು ದೋಷಮುಕ್ತಗೊಳಿಸಲಾಗಿತ್ತು. ಆದರೆ ಈ ಪ್ರಕರಣದಲ್ಲಿ, ನಕಲಿ ಸರೀಸೃಪವನ್ನು ಬಳಸಿ ಮತ್ತು ಇಡೀ ಅಪರಾಧದ ದೃಶ್ಯವನ್ನು ಮರುಸೃಷ್ಟಿಸುವ ಮೂಲಕ ಪೊಲೀಸರು ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದ್ದರು.

ಪ್ರಕರಣದ ಹಿನ್ನೆಲೆ:

ದೇಶವನ್ನೆ ಬೆಚ್ಚಿ ಬೀಳಿಸಿದ್ದ ಪ್ರಕರಣದಲ್ಲಿ, 25 ವರ್ಷದ ಗೃಹಿಣಿಯಾದ ಉತ್ರಾ 2020 ರ ಮೇ ತಿಂಗಳ 7 ರಂದು ಹಾವಿನ ಕಡಿತದಿಂದ ಅವರ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಆರಂಭದಲ್ಲಿ, ಅದನ್ನು ನೈಸರ್ಗಿಕ ಹಾವು ಕಡಿತ ಎಂದು ಹೇಳಲಾಗಿತ್ತಾದರೂ, ಉತ್ರಾ ಅವರ ಕುಟುಂಬ ಅದನ್ನು ಕೊಲೆ ಎಂದು ಆರೋಪಿಸಿದ್ದರು.

ವರದಕ್ಷಿಣೆಗಾಗಿ ಪತಿ ಮತ್ತು ಆತನ ಕುಟುಂಬ ಉತ್ರಾ ಅವರಿಗೆ ಪದೇ ಪದೇ ಕಿರುಕುಳ ನೀಡುತ್ತಿತ್ತು ಆರೋಪಿಸಿದ್ದರು. ಅಲ್ಲದೆ, ಮುಚ್ಚಿದ ಹವಾನಿಯಂತ್ರಿತ ಕೋಣೆಗೆ ಹಾವು ಬರಲು ಸಾಧ್ಯವಿಲ್ಲ. ಜೊತೆಗೆ ಮನೆಯ ನೆಲವು ಟೈಲ್ಸ್‌ ಹಾಕಿರುವುದರಿಂದ ಅದು ಅಸಾಧ್ಯ ಎಂದು ವಾದಿಸಿದ್ದರು. ಚಿನ್ನ ಮತ್ತು ಆಸ್ತಿಯನ್ನು ಪಡೆಯಲು ಈ ಹತ್ಯೆಯನ್ನು ನಡೆಸಲಾಗಿದೆ, ಈ ಘಟನೆಗೂ ಒಂಬತ್ತು ವಾರದ ಮುಂಚೆ ಕೂಡಾ ಉತ್ರಾ ಅವರಿಗೆ ಹಾವೊಂದು ಕಚ್ಚಿದ್ದರಿಂದ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದರು.

ಹಾವಿನ ಶಾಪ ಕುಟುಂಬದ ಮೇಲಿದೆ ಎಂದು ಅವರನ್ನು ನಂಬಿಸಲಾಗಿತ್ತಾದರೂ, ಅದನ್ನು ನಂಬದ ಕುಟುಂಬ ಪ್ರಕರಣದ ತನಿಖೆಗೆ ಒತ್ತಾಯಿಸಿದ್ದರು. ಅದರಂತೆ, ಪೋಲಿಸ್ ತನಿಖೆ ಪ್ರಾರಂಭವಾಗಿ ಸೂರಜ್ ಕುಮಾರ್ ವಿರುದ್ದ 1000 ಪುಟಗಳ ಚಾರ್ಜ್ ಶೀಟ್ ತಯಾರಿಸಿದ್ದರು. ಇದರಲ್ಲಿ ಅವನ ಕೃತ್ಯವನ್ನು ಪೊಲೀಸರು ಬಯಲಿಗೆಳೆದಿದ್ದರು.

ಸೂರಜ್ ಕುಮಾರ್‌ ಜೊತೆಗೆ ಅವನಿಗೆ ಎರಡು ಹಾವಗಳನ್ನು ಪಡೆಯಲು ಸಹಾಯ ಮಾಡಿದ್ದ ಇನ್ನೊಬ್ಬ ವ್ಯಕ್ತಿಯನ್ನು ಕೂಡಾ ಪೊಲೀಸರು ಬಂದಿಸಿದ್ದರು. ಸೂರಜ್ ಅವನಿಗೆ 10 ಸಾವಿರ ನೀಡಿ ಹಾವುಗಳನ್ನು ಖರೀದಿಸಿದ್ದನು. ಹಾವು ಮಾರಾಟ ಮಾಡಿದ ವ್ಯಕ್ತಿಗೆ ಸೂರಜ್ ಯಾಕಾಗಿ ತನ್ನಿಂದ ಹಾವುಗಳನ್ನು ಕೊಂಡುಕೊಂಡಿದ್ದಾನೆ ಎಂಬ ವಿಷಯ ತಿಳಿದಿರಲಿಲ್ಲ.

ಪೊಲೀಸ್‌ ವಿಚಾರಣೆಯ ಸಮಯದಲ್ಲಿ ಸೂರಜ್ ಕುಮಾರ್‌ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದನು. ತನ್ನ ಹೆಂಡತಿಯನ್ನು ಕೊಲ್ಲುವ ಉದ್ದೇಶದಿಂದ ಎರಡು ಹಾವುಗಳನ್ನು ಹಸಿವಿನಲ್ಲಿ ಕೆಡವಿ ಜಾರ್‌ ಒಂದರಲ್ಲಿ ಸಂಗ್ರಹಿಸಿ ಇಟ್ಟಿದ್ದೆ ಎಂದು ಒಪ್ಪಿಕೊಂಡಿದ್ದನು. ಇದರ ನಂತರ, ಸೂರಜ್‌ನ ತಂದೆ, ತಾಯಿ ಮತ್ತು ಸಹೋದರಿಯನ್ನು ಬಂಧಿಸಲಾಗಿತ್ತು. ಅವರು ಉತ್ರಾ ಅವರ ಸುಮಾರು 38 ಪವನ್ ಚಿನ್ನವನ್ನು ಮನೆಯ ಹಿಂದಿನ ರಬ್ಬರ್‌ ಎಸ್ಟೇಟ್‌ನಲ್ಲಿ ಗುಂಡಿತೋಡಿ ಬಚ್ಚಿಟ್ಟಿದ್ದರು.

Leave a Comment

Your email address will not be published. Required fields are marked *