ನೇಪಾಳ: ಕಣಿವೆ ದೇಶದಲ್ಲಿ ಭಾರೀ ಅನಾಹುತ ಸಂಭವಿಸಿದ್ದು, ಮುಗು ಜಿಲ್ಲೆಯ ಗಮಗಧಿಗೆ ತೆರಳುತ್ತಿದ್ದ ಬಸ್ ಸ್ಕಿಡ್ ಆಗಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಿಂದ ಸುಮಾರು 300 ಮೀಟರ್ ದೂರದಲ್ಲಿರುವ ನದಿಗೆ ಉರುಳಿಬಿದ್ದಿದೆ. ಘಟನೆಯಿಂದಾಗಿ 29ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಇದುವರೆಗೆ ಸಾವನ್ನಪ್ಪಿರುವವರ ಸಂಖ್ಯೆ 32ಕ್ಕೆ ಏರಿಕೆಯಾಗಿದೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ.
ವಿಜಯದಶಮಿ ಹಬ್ಬವನ್ನು ಆಚರಿಸುವ ಸಲುವಾಗಿ ಜನರು ಬಸ್ಸಿನ ಮೂಲಕ ತಮ್ಮ ಊರುಗಳಿಗೆ ತೆರಳುತ್ತಿದ್ದರು ಎನ್ನಲಾಗುತ್ತಿದೆ. ಬಸ್ಸಿನಲ್ಲಿ ಒಟ್ಟು ಎಷ್ಟು ಮಂದಿ ಪ್ರಯಾಣಿಕರು ಇದ್ದರು ಅನ್ನೋ ಬಗ್ಗೆ ಪೊಲೀಸರು ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಹಲವರು ಗಂಭೀರವಾಗಿ ಗಾಯಗೊಂಡಿರುವ ಹಿನ್ನೆಲೆಯಲ್ಲಿ ಸಾವಿನ ಸಂಖ್ಯೆ ಏರಿಕೆಯಾಗುವ ಆತಂಕ ಎದುರಾಗಿದೆ.
ಅಪಘಾತದ ಸ್ಥಳಕ್ಕೆ ಇದೀಗ ರಕ್ಷಣಾ ಕಾರ್ಯಾಚರಣೆ ನಡೆಸುವ ಸಲುವಾಗಿ ನೇಪಾಳ ಸೇನೆಯ ಚಾಪರ್‌ನ್ನು ಕಳುಹಿಸಿಕೊಡಲಾಗಿದೆ. ಇನ್ನು ಹಲವರ ತಲೆಗೆ ಗಂಭೀರ ಗಾಯವಾಗಿದ್ದು, 10 ಜನರನ್ನು ಕೊಹಲ್‌ಪುರ್ ವೈದ್ಯಕೀಯ ಕಾಲೇಜಿಗೆ ಮತ್ತು ಐವರನ್ನು ನೇಪಾಳಗುಂಜ್‌ನ ನರ್ಸಿಂಗ್ ಹೋಂಗೆ ಚಿಕಿತ್ಸೆಗಾಗಿ ಕಳುಹಿಸಲಾಗಿದೆ ಎಂದು ನೇಪಾಳಗುಂಜ್ ಏರ್‌ಪೋರ್ಟ್ ಸೆಕ್ಯುರಿಟಿ ಗಾರ್ಡ್‌ನ ಉಸ್ತುವಾರಿ ಸಂತೋಷ್ ಷಾ ಹೇಳಿದ್ದಾರೆ.