ಕಡಬ: ಇಲ್ಲಿನ ಕುಂತೂರುಪದವು ಸಮೀಪದ ಅನ್ನಡ್ಕದಲ್ಲಿ ಹರಿಯುವ ಸಣ್ಣ ತೊರೆಯಲ್ಲಿ ತಲೆಬುರುಡೆ ಮತ್ತು ಅಸ್ತಿಪಂಜರ ಪತ್ತೆಯಾದ ಬೆನ್ನಲ್ಲೇ ಅದೇ ಗ್ರಾಮದ ವ್ಯಕ್ತಿ ನಾಪತ್ತೆಯಾಗಿರುವ ಬಗ್ಗೆ ಕಡಬ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಡಬ ತಾಲೂಕಿನ ಕುಂತೂರು ಗ್ರಾಮದ ಎರ್ಮಾಳದ ಸತೀಶ್(50ವ) ಎಂಬವರು ಎರಡು ತಿಂಗಳ ಹಿಂದೆಯೇ ನಾಪತ್ತೆಯಾಗಿದ್ದು ಪತಿ ನಾಪತ್ತೆಯಾದ ಬಗ್ಗೆ ಪತ್ನಿ ಗೀತಾ ಅವರು ಠಾಣೆಗೆ ದೂರು ನೀಡಿದ್ದಾರೆ. ಕಳೆದ ಆಗಸ್ಟ್ 2 ರಂದು ಮನೆಬಿಟ್ಟು ಹೋದವರು ಬಳಿಕ ನಾಪತ್ತೆಯಾಗಿದ್ದಾರೆ. ತನ್ನ ಗಂಡ ಮದ್ಯಪಾನ ವ್ಯಸನಿಯಾಗಿದ್ದು, ವಿನಾಕಾರಣ ಜಗಳವಾಡಿ ,ಆಗಾಗ ಮನೆಬಿಟ್ಟು ಹೋಗಿ ವಾರಗಳ ನಂತರ ಮನೆ ಸೇರುತ್ತಿದ್ದರು. ಮೊನ್ನೆಯೂ ಮನೆ ಬಿಟ್ಟು ಹೋಗಿದ್ದು ಎಲ್ಲಿಯೋ ದೂರ ಹೋಗಿ ನೆಲೆಸಿರಬಹುದೆಂದು ತಿಳಿದು ನಾನು ದೂರು ನೀಡಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಇದೀಗ ಮನೆಯಿಂದ ಅರ್ಧ ಕಿ.ಮೀ ದೂರದಲ್ಲಿ ಮೃತದೇಹದ ಕುರುಹುಗಳು ಪತ್ತೆಯಾದ ಹಿನ್ನೆಲೆಯಲ್ಲಿ ಇದು ಕಾಣೆಯಾದ ಸತೀಶರ ಎಂಬವರದ್ದೇ ಎಂಬ ಸಂಶಯ ಕುಟುಂಬಸ್ಥರನ್ನು ಬಲವಾಗಿ ಕಾಡಿದೆ. ಪೊಲೀಸರು ದೂರು ಸ್ವೀಕರಿಸಿಕೊಂಡಿದ್ದು ತನಿಖೆ ನಡೆಯುತ್ತಿದೆ. ಆದರೆ ದೊರಕಿರುವ ಅವಶೇಷಗಳ ವೈದ್ಯಕೀಯ ವರದಿಗಳ ನಂತರವಷ್ಟೇ ಕಳೆಬರ ಸತೀಶರದ್ದಾ ಎಂಬ ಬಗ್ಗೆ ಹೇಳಲಾಗುತ್ತದೆ .