ಮಂಗಳೂರು: ರಾಜ್ಯದ ಕರಾವಳಿ ಮಲೆನಾಡು ಭಾಗದಲ್ಲಿ ಹೈ ಅಲರ್ಟ್ ನಡುವೆಯೇ ಮತ್ತೆ ಸ್ಯಾಟಲೈಟ್ ಫೋನ್ ರಿಂಗಣಿಸಿದೆ. ಈ ಭಾಗದ ಐದಕ್ಕೂ ಹೆಚ್ಚು ಕಡೆ ಸ್ಯಾಟಲೈಟ್ ಫೋನ್ ಕರೆ ಸಕ್ರಿಯ ಆಗಿರುವುದು ಬೆಳಕಿಗೆ ಬಂದಿದೆ.
ದೇಶಾದ್ಯಂತ ಉಗ್ರರ ಆತಂಕ ಇರುವ ಹಿನ್ನೆಲೆಯಲ್ಲಿ ಕೇಂದ್ರ ಗುಪ್ತಚರ ವಿಭಾಗ ಈಗಾಗಲೇ ಸ್ಯಾಟಲೈಟ್ ಫೋನ್ ಕುರಿತು ಎಚ್ಚರಿಕೆ ನೀಡಿದ್ದು, ಹೈಅಲರ್ಟ್ ಆಗಿರುವಂತೆ ಸೂಚಿಸಿದೆ.
ರಾಜ್ಯ ಕರಾವಳಿ ಹಾಗೂ ಮಲೆನಾಡುಭಾಗದ ಗುಡ್ಡಗಾಡು ಪ್ರದೇಶದಲ್ಲಿ ಅನುಮಾನಾಸ್ಪದ ಚಟುವಟಿಕೆ ನಡೆಯುತ್ತಿರುವ ಬಗ್ಗೆ ಕೇಂದ್ರ ಗುಪ್ತಚರ ವಿಭಾಗ ಮೊದಲೇ ಮಾಹಿತಿ ಕಲೆಹಾಕಿತ್ತು. ಇಲ್ಲಿಂದ ಪದೇ ಪದೆ ಸ್ಯಾಟಲೈಟ್ ಫೋನ್ ಕಾರ್ಯಾಚರಿಸುತ್ತಿರುವುದು ಹಿಂದೆಯೇ ಬೆಳಕಿಗೆ ಬಂದಿತ್ತು. ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಮತ್ತು ಮುಡಿಪು, ಚಿಕ್ಕಮಗಳೂರಿನ ಎರಡು ಕಡೆ ಹಾಗೂ ಉತ್ತರ ಕನ್ನಡ ಜಿಲ್ಲೆಯ ದಟ್ಟಅರಣ್ಯ ಪ್ರದೇಶದಲ್ಲಿ ಒಂದು ವಾರದ ಹಿಂದೆ ಸ್ಯಾಟಲೈಟ್ ಫೋನ್ ಆ್ಯಕ್ಟಿವ್ ಆಗಿರುವ ಮಾಹಿತಿ ಲಭಿಸಿದೆ.
ಕೇಂದ್ರ ಗುಪ್ತಚರ ವಿಭಾಗ ಒಂದು ವರ್ಷದಿಂದ ಈ ಬಗ್ಗೆ ನಿಗಾ ಇರಿಸಿದ್ದು, ಒಂದೇ ವರ್ಷದಲ್ಲಿ ಸ್ಯಾಟಲೈಟ್ ಫೋನ್ ಕರೆ ಪತ್ತೆಯಾಗುತ್ತಿರುವುದು ಇದು ಮೂರನೇ ಬಾರಿ. ಈ ವಿಚಾರ ಇತ್ತೀಚೆಗೆ ವಿಧಾನಮಂಡಲ ಅಧಿವೇಶನದಲ್ಲೂ ಪ್ರಸ್ತಾಪಗೊಂಡಿತ್ತು. ಗೃಹ ಸಚಿವರು ಸ್ಯಾಟಲೈಟ್ ಫೋನ್ ಕರೆ ಬಗ್ಗೆ ಸದನದಲ್ಲಿ ಮಾತನಾಡಿದ್ದರು.
ಹೈಅಲರ್ಟ್ ನಡುವೆಯೂ ರಾಜ್ಯದಲ್ಲಿ ಸ್ಯಾಟಲೈಟ್ ಫೋನ್‌ಗಳು ಮತ್ತೆ ಅ್ಯಕ್ಟಿವ್ ಆಗಿರುವ ಬಗ್ಗೆ ಗುಪ್ತಚರ ವಿಭಾಗ ತನಿಖೆ ಚುರುಕುಗೊಳಿಸಿದೆ. ರಾಜ್ಯದ ಐದು ಕಡೆ ಸ್ಯಾಟಲೈಟ್ ಫೋನ್ ಕರೆ ಪತ್ತೆಯಾಗಿದೆ. ಸ್ಯಾಟಲೈಟ್ ಫೋನ್ ಮೂಲಕ ಅಪರಿಚಿತರು ಸಂಪರ್ಕ ಸಾಧಿಸುತ್ತಿದ್ದು, ಯಾರೊಂದಿಗೆ, ಯಾರಾರಯರು ಸಂಪರ್ಕದಲ್ಲಿ ಇದ್ದಾರೆ ಎಂಬ ಮಾಹಿತಿ ಇನ್ನೂ ಲಭ್ಯವಾಗಿಲ್ಲ .