ಬಂಟ್ವಾಳ: ಭೂಮಿಯ ಗಡಿ ಗುರುತಿಸಲು ಮಹಿಳೆಯೊಬ್ಬರಿಂದ ಲಂಚ ಸ್ವೀಕರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸಿಬಿ (ಭ್ರಷ್ಟಾಚಾರ ನಿಗ್ರಹ ದಳ) ಸಿಬ್ಬಂದಿ ಬಂಟ್ವಾಳ ಸರ್ವೇ ವಿಭಾಗದ ಸರ್ವೇಯರ್‌ನನ್ನು ಬಂಧಿಸಿದ್ದಾರೆ.
ಬಿ.ಸಿ.ರೋಡಿನ ಮಿನಿ ವಿಧಾನ ಸೌಧದಲ್ಲಿರುವ ಸರ್ವೇಕ್ಷಣಾ ಇಲಾಖೆಯಲ್ಲಿ ಸರ್ವೇಯರ್ ಸುರೇಶ್ ಬಂಧಿತ ಆರೋಪಿ. ಈತ ಮಹಿಳೆಯಿಂದ 6,000 ಲಂಚ ಸ್ವೀಕರಿಸುತ್ತಿದ್ದಾಗ ಎಸಿಬಿ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.
ಕಲ್ಲಿಯ ಪ್ರೇಮಾ ಸರಿತಾ ಪಿಂಟೋ ಎಂಬವರು ತನ್ನ ಭೂಮಿಯಲ್ಲಿ ಗಡಿ ಸಮೀಕ್ಷೆಗಾಗಿ ಅರ್ಜಿ ಸಲ್ಲಿಸಿದ್ದರು. ಸರ್ವೇಯರ್ ಆಕೆಯಿಂದ 7,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರಿಂದ, ಆಕೆ ಎಸಿಬಿಗೆ ದೂರು ನೀಡಿದ್ದರು. ಅದರಂತೆ ಲಂಚ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಅಧಿಕಾರಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ.
ಪಶ್ಚಿಮ ರೇಂಜ್ ಎಸಿಬಿ ಎಸ್ಪಿ ಸೈಮನ್ ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ಕೆಸಿ ಪ್ರಕಾಶ್, ಇನ್ಸ್ಪೆಕ್ಟರ್ ಗುರುರಾಜ್ ಮತ್ತು ಶಾಮ್ ಸುಂದರ್ ಮತ್ತು ಇತರರು ದಾಳಿಯಲ್ಲಿ ಭಾಗವಹಿಸಿದರು.