ಓಸ್ಲೊ: ವಿಶ್ವ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ಭಾರತದ ಮಹಿಳಾ ಯುವ ಕುಸ್ತಿಪಟುಗಳು ಅಮೋಘ ಸಾಧನೆ ಮೆರೆದಿದ್ದಾರೆ.
ನಾರ್ವೆಯ ಓಸ್ಲೋದಲ್ಲಿ ಗುರುವಾರ ರಾತ್ರಿ ನಡೆದ ಮಹಿಳೆಯರ 57 ಕೆ.ಜಿ. ವಿಭಾಗದ ಫೈನಲ್ನಲ್ಲಿ 20 ವರ್ಷದ ಮಲಿಕ್ ಬೆಳ್ಳಿ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಆ ಮೂಲಕ ವಿಶ್ವ ಚಾಂಪಿಯನ್ ಶಿಪ್ ಕೂಟದಲ್ಲಿ ಬೆಳ್ಳಿ ಪದಕ ಜಯಿಸಿದ ಭಾರತದ ಮೊದಲ ಮಹಿಳಾ ಕುಸ್ತಿಪಟು ಎನ್ನುವ ಹಿರಿಮೆಗೆ ಅಂಶು ಮಲಿಕ್ ಪಾತ್ರರಾಗಿದ್ದಾರೆ.
ಮಹಿಳೆಯರ 57 ಕೆ.ಜಿ. ವಿಭಾಗದ ಫೈನಲ್ನಲ್ಲಿ 20 ವರ್ಷದ ಅಂಶು, ಟೋಕಿಯೋ ಒಲಿಂಪಿಕ್ಸ್ನ ಕಂಚು ವಿಜೇತೆ, ಅಮೆರಿಕದ ಹೆಲೆನ್ ಮರೌಲಿಸ್ ವಿರುದ್ಧ 1-4 ಅಂತರದಲ್ಲಿ ಸೋಲುಂಡರು. ಟೂರ್ನಿಯುದ್ದಕ್ಕೂ ಅತ್ಯುತ್ತಮ ಪ್ರದರ್ಶನ ನೀಡಿದ್ದ ಅಂಶು, ಫೈನಲ್ನಲ್ಲಿ ಹೆಲೆನ್ಲ ಸವಾಲಿನೆದುರು ಮಂಡಿಯೂರಿದರು.