ಉಡುಪಿ: ಕುಕ್ಕಿಕಟ್ಟೆ ಸಮೀಪ ಡಯಾನಾ ಟಾಕೀಸು ಬಳಿ 2017 ರ ಮಾ. 16 ರಂದು ನಡೆದಿದ್ದ ಅಪಘಾತದಲ್ಲಿ ಬಾಲಕಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯ ಆರೋಪ ಸಾಬೀತಾದ ಹಿನ್ನೆಲೆ ಆರೋಪಿಗೆ 2 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿ ಉಡುಪಿ ಜಿಲ್ಲಾ ನ್ಯಾಯಾಲಯ ತೀರ್ಪು ನೀಡಿದೆ.
ಉಡುಪಿಯ ಪ್ರಸಿದ್ಧ ಆಯುರ್ವೇದ ವೈದ್ಯ, ಅಲೆವೂರು ನಿವಾಸಿ ಲಕ್ಷ್ಮೀಪ್ರಸಾದ್ ಭಟ್ ಪ್ರಕರಣದ ಆಫರಾದಿ. ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ಕೈಗೆತ್ತಿಕೊಂಡ ಉಡುಪಿ ಜಿಲ್ಲಾ 1ನೇ ಹೆಚ್ಚುವರಿ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಧೀಶರಾದ ಶ್ಯಾಮ್ ಪ್ರಕಾಶ್ ಅವರು, ಆರೋಪಿಯ ಆರೋಪ ಸಾಬೀತಾದ ಹಿನ್ನೆಲೆ ಆರೋಪಿಗೆ 2 ವರ್ಷ ಕಾರಾಗ್ರಹ ವಾಸದ ಶಿಕ್ಷೆ ಮತ್ತು 11,000 ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
2017 ರ ಮಾ.16 ರಂದು ಲಕ್ಷ್ಮಿ ಪ್ರಸಾದ್ ಭಟ್ ಎಂಬಾತ ತನ್ನ ಕಾರನ್ನು ಕುಕ್ಕಿಕಟ್ಟೆ ಜಂಕ್ಷನ್ ಕಡೆಯಿಂದ ಡಯಾನಾ ಟಾಕೀಸು ಕಡೆಗೆ ಅತೀ ವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಅದೇ ರಸ್ತೆಯಲ್ಲಿ ನಡೆದು ಕೊಂಡು ಹೋಗುತ್ತಿದ್ದ ಬಾಲಕಿಗೆ ಢಿಕ್ಕಿಹೊಡೆದಿದ್ದರು. ಪರಿಣಾಮ ಬಾಲಕಿ ರಸ್ತೆಗೆ ಬಿದ್ದು ತಲೆಗೆ ಗಂಭೀರ ಗಾಯಗೊಂಡಿದ್ದರು. ತಕ್ಷಣ ಅವರನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.
ಈ ಬಗ್ಗೆ ಉಡುಪಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಉಡುಪಿ ಸಂಚಾರ ಠಾಣೆಯ ವೃತ್ತ ನಿರೀಕ್ಷಕರಾದ ನವೀನ್ ಚಂದ್ರ ಜೋಗಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆ ಯಲ್ಲಿ ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರಾದ ಮೋಹಿನಿ.ಕೆ ಇವರು ವಾದಿಸಿದ್ದರು.