ನ್ಯೂಯಾರ್ಕ್: ಇಲ್ಲಿನ ಟೈಮ್ಸ್ ಸ್ಕ್ವೇರ್ ಸಬ್ವೇ ಸ್ಟೇಷನ್ ನಲ್ಲಿ ವ್ಯಕ್ತಿಯೊಬ್ಬರು ಮೂತ್ರ ವಿಸರ್ಜನೆ ಮಾಡುವಾಗ ಆಕಸ್ಮಿಕವಾಗಿ ಕಿಸೆಯಲ್ಲಿದ್ದ ಪಿಸ್ತೂಲ್ನಿಂದ ಗುಂಡು ಹಾರಿದ ಘಟನೆ ನಡೆದಿದೆ. ದೊಡ್ಡದಾಗಿ ಶಬ್ದವಾಗುತ್ತಿದ್ದಂತೆಯೇ ವ್ಯಕ್ತಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂಬ ಮಾಹಿತಿ ವರದಿಗಳಿಂದ ತಿಳಿದು ಬಂದಿದೆ. ವ್ಯಕ್ತಿ ತನ್ನ ಪ್ಯಾಂಟ್ ಕಿಸೆಯಲ್ಲಿ ಲೋಡ್ ಆಗಿದ್ದ ಪಿಸ್ತೂಲನ್ನು ಇಟ್ಟುಕೊಂಡಿದ್ದನು, ಮೂತ್ರ ವಿಸರ್ಜಿಸುತ್ತಿರುವಾಗ ಆಕಸ್ಮಿಕವಾಗಿ ಪಿಸ್ತೂಲ್ನಿಂದ ಗುಂಡು ಹಾರಿದೆ. ಇದರ ಪರಿಣಾಮ ಆತನ ಕಾಲಿಗೆ ಗುಂಡು ಬಿದ್ದಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಡೈಲಿ ನ್ಯೂಸ್ ಪ್ರಕಾರ, 39 ವರ್ಷದ ವ್ಯಕ್ತಿ ನಿಲ್ದಾಣ ಒಳಗೆ ಮೂತ್ರ ವಿಸರ್ಜಿಸುತ್ತಿದ್ದನು. ಆಗ ಆಕಸ್ಮಿಕವಾಗಿ ಪಿಸ್ತೂಲ್ನಿಂದ ಗುಂಡು ಹಾರಿದೆ. ಆ ತಕ್ಷಣವೇ ಇನ್ನೊಬ್ಬ ವ್ಯಕ್ತಿಗೆ ಪಿಸ್ತೂಲನ್ನು ರವಾನಿಸಿ ಅಲ್ಲಿಂದ ಪರಾರಿಯಾಗಿದ್ದಾನೆ. ಜೋರಾಗಿ ಗುಂಡು ಹಾರಿರುವ ಶಬ್ದ ಕೇಳಿಬಂದಿದೆ ಎಂದು ಪ್ರತ್ಯಕ್ಷದರ್ಶಿಯೋರ್ವರು ತಿಳಿಸಿದ್ದಾರೆ ಈ ಕುರಿತಂತೆ ವರದಿಗಳಿಂದ ಮಾಹಿತಿ ಲಭ್ಯವಾಗಿದೆ.
ಅಲ್ಲೇ ಹತ್ತಿರದಿಲ್ಲದ್ದ ಸ್ಮೋಕ್ ಸಿಟಿ ಎಂಬ ಅಂಗಡಿಯಲ್ಲಿ ಅಳವಡಿಸಿದ್ದ ಸಿಸಿ ಟಿವಿಯಲ್ಲಿ ದೃಶ್ಯ ರೆಕಾರ್ಡ್ ಆಗಿದೆ. ಹಸಿರು ಟೋಪಿ ಧರಿಸಿದ್ದ ಬಂದೂಕುಧಾರಿ, ನಿಲ್ದಾಣದ ಒಳಗೆ ಪ್ರವೇಶಿಸುವ ಮೊದಲು ಇನ್ನಿತರರೊಂದಿಗೆ ಮಾತನಾಡುತ್ತಾ ನಿಂತಿರುವುದು ಹಾಗೂ ಕೆಲವು ನಿಮಿಷಗಳ ಬಳಿಕ ವ್ಯಕ್ತಿ ನಿಲ್ದಾಣದಿಂದ ಓಡಿ ಹೋಗುತ್ತಿರುವ ದೃಶ್ಯದಲ್ಲಿ ಸೆರೆಯಾಗಿದೆ. ವರದಿಗಳ ಪ್ರಕಾರ, ವ್ಯಕ್ತಿ ಗುಲಾಬಿ ಬಣ್ಣದ ಉಡುಗೆ ತೊಟ್ಟಿದ್ದ ವ್ಯಕ್ತಿಗೆ ಬಂದೂಕು ಕೊಟ್ಟು ಸ್ಥಳದಿಂದ ಪರಾರಿಯಾಗಿದ್ದಾನೆ ಎಂಬ ಮಾಹಿತಿ ತಿಳಿದು ಬಂದಿದೆ.