ಮಂಗಳೂರು: ಕರಾವಳಿಯ ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ ಜಾರಿಗೆ ತರಬೇಕು ಎಂದು ಹಿಂದು ಸಂಘಟನೆಗಳ ಒತ್ತಾಯದ ಬೆನ್ನಲ್ಲೇ ಕದ್ರಿ ಮಂಜುನಾಥ ದೇವಸ್ಥಾನ, ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಹಿಂದು ಸಂಪ್ರದಾಯದಂತೆ ವಸ್ತ್ರ ಸಂಹಿತೆ ಪಾಲಿಸಬೇಕೆಂದು ಬೋರ್ಡ್ ಹಾಕಲಾಗಿತ್ತು. ಇದೀಗ ಪೊಳಲಿ ರಾಜರಾಜೇಶ್ವರಿ ದೇವಸ್ಥಾನದಲ್ಲಿಯೂ ವಸ್ತ್ರ ಸಂಹಿತೆ ಕಡ್ಡಾಯ ಎಂದು ಬ್ಯಾನರ್ ಹಾಕಲಾಗಿದೆ.
ದೇವಸ್ಥಾನಗಳಲ್ಲಿ ಹಿಂದು ಸಂಪ್ರದಾಯದಂತೆ ವಸ್ತ್ರ ಸಂಹಿತೆ ಪಾಲನೆ ಮಾಡುವಂತಾಗಬೇಕು. ದೇವಸ್ಥಾನದ ಪಾವಿತ್ರ್ಯ ಉಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಡ್ಡಾಯವಾಗಿ ವಸ್ತ್ರ ಸಂಹಿತೆ ಜಾರಿ ಮಾಡಬೇಕು ಎಂದು ಹಿಂದೂ ಸಂಘಟನೆಗಳು ಆಗ್ರಹಿಸಿದ್ದವು. ಈ ಬಗ್ಗೆ ಮುಜರಾಯಿ ಇಲಾಖೆಯಿಂದಲೇ ನಿಯಮ ಜಾರಿಗೆ ತರಬೇಕು ಎಂದು ಧಾರ್ಮಿಕ ಪರಿಷತ್ ನಾಯಕರು ಸರಕಾರಕ್ಕೆ ಪತ್ರವನ್ನೂ ಬರೆದಿದ್ದರು. ಆದರೆ ಸರ್ಕಾರದಿಂದ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಬಂದಿರಲಿಲ್ಲ. ಹೀಗಿದ್ದರೂ ದೇವಸ್ಥಾನಗಳ ಎದುರು ವಸ್ತ್ರ ಸಂಹಿತೆಯ ಬಗ್ಗೆ ಬೋರ್ಡ್ ಹಾಕಲಾಗಿದೆ.
ಕುಕ್ಕೆ ಸುಬ್ರಹ್ಮಣ್ಯಕ್ಕೆ ಬರುವ ಭಕ್ತರಿಗೆ ಪುರುಷರು ಧೋತಿ, ಪಂಚೆ ಅಥವಾ ಪ್ಯಾಂಟ್ ಧರಿಸಬಹುದು. ಮಹಿಳೆಯರು ಸೀರೆ ಅಥವಾ ಚೂಡಿದಾರ ಧರಿಸಿ ದೇವಸ್ಥಾನಕ್ಕೆ ಬರಬೇಕು ಎಂಬ ನಿಯಮದ ಬೋರ್ಡ್ ಹಾಕಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಕಶೆಕೋಡಿ ಸೂರ್ಯನಾರಾಯಣ ಭಟ್, ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ ಜಾರಿಯಾಗಬೇಕೆಂದು ನಮ್ಮೆಲ್ಲರ ಅಭಿಪ್ರಾಯ. ಈ ಬಗ್ಗೆ ಸರ್ಕಾರ ನಿಯಮ ರೂಪಿಸಬೇಕು. ಇಲಾಖೆಯಿಂದ ಸಭೆ ನಡೆದಿದ್ದು, ಶೀಘ್ರದಲ್ಲೇ ವಸ್ತ್ರ ಸಂಹಿತೆ ಜಾರಿಯಾಗುವ ವಿಶ್ವಾಸ ಇದೆ ಎಂದಿದ್ದಾರೆ.
ಇದೇ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಟೀಲು ದೇವಸ್ಥಾನದ ಹರಿನಾರಾಯಣ ಆಸ್ರಣ್ಣ, ಹಿಂದು ಸಂಪ್ರದಾಯದಂತೆ ವಸ್ತ್ರ ಧರಿಸಿ ಬರುವಂತೆ ಇದು ಮನವಿಯಷ್ಟೇ. ಯಾವುದೇ ಕಡ್ಡಾಯ ನಿಯಮ ವಿಧಿಸಿಲ್ಲ. ಈ ಬಗ್ಗೆ ಧಾರ್ಮಿಕ ದತ್ತಿ ಇಲಾಖೆಯಿಂದ ಆದೇಶವೂ ಬಂದಿಲ್ಲ. ಆದರೆ ದೇವಸ್ಥಾನದ ಪಾವಿತ್ರ್ಯ ಉಳಿಸುವ ನಿಟ್ಟಿನಲ್ಲಿ ಈ ರೀತಿಯ ಸಂಪ್ರದಾಯ ಪಾಲನೆ ಮಾಡಬೇಕು ಎಂದು ಹೇಳಿದ್ದಾರೆ.