ಸುಳ್ಯ : ಸುಳ್ಯ ಕೋರ್ಟ್ ವಾರೆಂಟ್ ಜಾರಿ ಮಾಡಿದ ಹಿನ್ನಲೆ ಇಂದು ಸುಳ್ಯ ನ್ಯಾಯಾಲಯದ ಪ್ರಥಮ ದರ್ಜೆ ನ್ಯಾಯಾಧೀಶರ ಎದುರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಜರಾಗಿದ್ದಾರೆ. ಹಳೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಕೆಶಿ ಸುಳ್ಯಕ್ಕೆ ಆಗಮಿಸಿ ಸಾಕ್ಷಿ ನುಡಿದಿದ್ದಾರೆ.
ನ್ಯಾಯಾಧೀಶರ ಎದುರು ಹಾಜರಾದ ಡಿಕೆಶಿ 2016ರ ಫೆಬ್ರವರಿ 27, 28ರಂದು ಐದಾರು ಬಾರಿ ಆರೋಪಿ ಗಿರಿಧರ್ ರೈ ನನಗೆ ಕರೆ ಮಾಡಿದ್ದಾನೆ. ತನ್ನ ಊರಿನಲ್ಲಿ ವಿದ್ಯುತ್ ಸಮಸ್ಯೆ ಇದೆ, ಪರಿಹರಿಸಿ ಅಂತ ಕೆಟ್ಟದಾಗಿ ಮಾತನಾಡಿದ್ದಾನೆ. ಕರೆ ಮಾಡಿದ ಎರಡೂ ದಿನವೂ ನನ್ನ ಜೊತೆ ಅವಾಚ್ಯ ಶಬ್ದ ಬಳಸಿ ಮಾತನಾಡಿದ್ದಾನೆ. ಬೋಮಗ ಸೂಮಗ ಎಂದು ನನ್ನ ವಿರುದ್ದ ಪದ ಪ್ರಯೋಗಿಸಿದ್ದಾನೆ. ಐದಾರು ಬಾರಿ ಕರೆ ಮಾಡಿದ್ದು, ಅದರಲ್ಲಿ ನಾನು ಎರಡು ಬಾರಿ ಕರೆ ಸ್ವೀಕರಿಸಿ ಮಾತನಾಡಿದ್ದೇನೆ. ಸಮಸ್ಯೆ ಅಧಿಕಾರಿಗಳಿಗೆ ಹೇಳಿ ಪರಿಹರಿಸೋದಾಗಿ ತಾಳ್ಮೆಯಿಂದ ಹೇಳಿದೆ, ಆದರೂ ಆತ ಅತ್ಯಂತ ಕೆಟ್ಟ ಭಾಷೆಯಲ್ಲಿ ನನಗೆ ಬೈದು ಕೊಲೆ ಬೆದರಿಕೆ ಹಾಕಿದ್ದಾನೆ. ಆ ಬಳಿಕ ನಾನು ಸಚಿವನಾಗಿದ್ದ ಕಾರಣ ಅಧಿಕಾರಿಗಳ ಮೂಲಕ ದೂರು ಕೊಡಿಸಿದೆ ಎಂದು ನ್ಯಾಯಾಧೀಶರ ಎದುರು ಡಿ.ಕೆ.ಶಿವಕುಮಾರ್ ಸಾಕ್ಷ್ಯ ನುಡಿದಿದ್ದಾರೆ.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಡಿಕೆಶಿ ಕಾನೂನಿಗೆ ತಲೆಬಾಗಿ ಕೋರ್ಟ್ ಗೆ ಹಾಜರಾಗಿದ್ದೇನೆ. ಸುಳ್ಯ ತಾಲೂಕಿನಲ್ಲಿ ವಿದ್ಯುತ್ ಸಮಸ್ಯೆ ಇದೆ ನಾನು ಸಚಿವನಾಗಿದ್ದ ಸಂದರ್ಭದಲ್ಲಿ ಸಮಸ್ಯೆ ಬಗೆಹರಿಸಲು ಪ್ರಯತ್ನ ಮಾಡಿದ್ದೇನೆ. ಈಗಿನ ನೂತನ ಸಚಿವರು ಸಮಸ್ಯೆ ಬಗೆಹರಿಸಬಹುದು ಎಂಬ ಭರವಸೆ ಇದೆ ಎಂದರು. ಆ ವ್ಯಕ್ತಿ ನನಗೆ ಮಾತ್ರವಲ್ಲದೇ ಅಧಿಕಾರಿಗಳಿಗೂ ಅವಾಚ್ಯ ಶಬ್ದದಿಂದ ಬೈದಿದ್ದಾರೆ. ಸಾರ್ವಜನಿಕ ಕೆಲಸ ಮಾಡೋವಾಗ ಕರ್ತವ್ಯಕ್ಕೆ ಅಡ್ಡಿ ಪ್ರಯತ್ನ ನಡೆಯುತ್ತದೆ. ಈ ಕಾರಣಕ್ಕಾಗಿ ಅಧಿಕಾರಿಗಳು ದೂರು ನೀಡಿದ್ದರು, ಪ್ರಕರಣಕ್ಕೆ ಸಂಬಂಧಿಸಿದ ವಿಚಾರವನ್ನು ನ್ಯಾಯಾಧೀಶರ ಮುಂದೆ ಹೇಳಿದ್ದೇನೆ ಎಂದರು.
ತುಳುವಿನಲ್ಲಿ ಫೇಸ್ ಬುಕ್ ಪೋಸ್ಟ್
ಇನ್ನು ತನ್ನ ಫೇಸ್‌ಬುಕ್ ಖಾತೆಯಲ್ಲಿ ಡಿಕೆಶಿ ತುಳುವಿನಲ್ಲಿಯೇ ಬರೆದು ಪೋಸ್ಟ್ ಮಾಡಿದ್ದಾರೆ. “ಕರಾವಳಿ ಜಿಲ್ಲೆ ದಕ್ಷಿಣ ಕನ್ನಡರ್ಧ್ ಇನಿ ದಿನ ಶುರು ಆಂಡ್. ಕುಡ್ಲರ್ದ್ ಸುಳ್ಯ ಮುಟ್ಟುನ ಮಾರ್ಗದ ನಡುಟು ಪಕ್ಷದ ನಾಯಕೇರ್, ಕಾರ್ಯಕರ್ತ ನಕುಲು ಎನನ್ ಪ್ರೀತಿ ಡ್ ಎದುಕೊನಿಯರ್. ಈ ಪ್ರೀತಿ ವಿಶ್ವಾಸ ಬೊಕ್ಕ ಬೆಂಬಲ ಎನ್ನ ಮಲ್ಲ ಶಕ್ತಿ” ಎಂದು ಬರೆದುಕೊಂಡಿದ್ದಾರೆ.
ಕೈಕೊಟ್ಟ ಕರೆಂಟ್| ಸಮಸ್ಯೆ ಮನವರಿಕೆ ಮಾಡಿದ ಜಡ್ಜ್
ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಸಾಕ್ಷ್ಯ ಹೇಳುತ್ತಿದ್ದ ಸಂದರ್ಭದಲ್ಲಿ ಕರೆಂಟ್ ಕೈಕೊಟ್ಟ ಪ್ರಸಂಗ ಇಂದು ನಡೆಯಿತು.
ಸುಳ್ಯದ ಜನ ವಿದ್ಯುತ್ ವ್ಯತ್ಯಯವಾಗುವ ಸಮಸ್ಯೆ ಆಗಾಗ ಎದುರಿಸುತ್ತಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಇಂದು ಮಾಜಿ ಪವರ್ ಮಿನಿಸ್ಟರ್ ಕೋರ್ಟ್ ಕಟೆಕಟೆಯ್ಲಲಿರುವಾಗಲೇ ಕರೆಂಟ್ ಹೋಗಿದೆ.
ವಿದ್ಯುತ್ ಸಚಿವರಾಗಿದ್ದ ಸಂದರ್ಭದಲ್ಲಿ ನಿಮಗೆ ಆರೋಪಿ ಗಿರಿಧರ್ ರೈ ಅವ್ಯಾಚ್ಯ ಶಬ್ಧಗಳಿಂದ ನಿಂದಿಸಿರೋದು ತಪ್ಪು. ಆದರೆ ಸುಳ್ಯ ದಲ್ಲಿ ಅಷ್ಟೊಂದು ವಿದ್ಯುತ್ ಸಮಸ್ಯೆ ಇದೆ. ಜನ ಪ್ರತಿನಿತ್ಯ ಲೋಡ್ ಶೆಡ್ಡಿಂಗ್ ನಿಂದ ಸಮಸ್ಯೆ ಅನುಭವಿಸುತ್ತಿದ್ದಾರೆ. ಈಗ ಸ್ವತಃ ನೀವೇ ಅನುಭವ ಮಾಡಿದ್ದೀರಿ. ಅಂತಾ ನ್ಯಾಯಾಧೀಶರು ಡಿ. ಕೆ. ಶಿವಕುಮಾರ್ ರಿಗೆ ಪರಿಸ್ಥಿತಿ ಮನವರಿಕೆ ಮಾಡಿದ್ದಾರೆ.