ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಾದ್ಯಂತ ಹಾಗೂ ಜಿಲ್ಲೆಯ ಕೆಲವೆಡೆಗಳಲ್ಲಿ ಸೋಮವಾರ ಗುಡುಗು ಸಹಿತ ಭಾರೀ ಮಳೆಯಾಗಿದೆ. ಬೆಳ್ತಂಗಡಿ ತಾಲೂಕಿನ ಕೆಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗಿದ್ದು, ರಾಷ್ಟ್ರೀಯ ಹೆದ್ದಾರಿ ಸಹಿತ ಹಲವು ರಸ್ತೆಯಲ್ಲಿ ಪ್ರವಾಹೋಪಾದಿಯಲ್ಲಿ ನೀರು ಹರಿದು, ವಾಹನ ಸಂಚಾರಕ್ಕೆ ಸಮಸ್ಯೆಯಾಯಿತು.
ಸುಳ್ಯ ತಾಲೂಕಿನ ಮಡಪ್ಪಾಡಿ, ಮರ್ಕಂಜ ಭಾಗದಲ್ಲಿ ಒಂದು ಗಂಟೆ ಅವಧಿಯಲ್ಲಿ 184 ಮಿ.ಮೀ. ಮಳೆ ದಾಖಲಾಗಿದೆ. ಪುತ್ತೂರು ತಾಲೂಕಿನ ಅಲ್ಲಲ್ಲಿ ಮಳೆಯಾಗಿದ್ದರೆ, ಕಡಬ ಭಾಗದಲ್ಲಿ ಗುಡುಗು ಮಳೆ ಅಬ್ಬರ ಜೋರಾಗಿತ್ತು. ಬಂಟ್ವಾಳ, ಮಂಗಳೂರು, ಮೂಡುಬಿದಿರೆ ತಾಲೂಕಿನಲ್ಲಿ ಸಂಜೆ ಗುಡುಗು ಸಹಿತ ಸಾಧಾರಣ ಮಳೆಯಾಗಿದೆ.
ಶಹೀನ್ ಚಂಡಮಾರುತದ ಹಿನ್ನೆಲೆಯಲ್ಲಿ ಮಂಗಳೂರಿನಿಂದ ಮಸ್ಕತ್‌ಗೆ ತೆರಳಬೇಕಾಗಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಸಂಚಾರ ದಿಢೀರ್ ರದ್ದುಗೊಂಡಿದೆ. ಅ. 7ರಂದು ವಿಮಾನ ತೆರಳಲಿದೆ ಎಂದು ವಿಮಾನ ನಿಲ್ದಾಣ ಮೂಲಗಳು ತಿಳಿಸಿವೆ.
ಬೆಳ್ತಂಗಡಿ ತಾಲೂಕಿನ ವಿವಿಧೆಡೆ ಮಧ್ಯಾಹ್ನದ ಬಳಿಕ ಏಕಾಏಕಿ ಗುಡುಗು ಸಿಡಿಲು ಸಹಿತ ಧಾರಾಕಾರ ಮಳೆಯಾಗಿದೆ. ಮಡಂತ್ಯಾರು, ಗುರುವಾಯಕನೆರೆ, ಧರ್ಮಸ್ಥಳ, ಚಾರ್ಮಾಡಿ, ಉಜಿರೆ, ಮುಂಡಾಜೆ, ಕೊಯ್ಯೂರು, ಬಂದಾರು, ವೇಣೂರು ಮೊದ ಲಾದೆಡೆ 2 ತಾಸಿಗೂ ಅಧಿಕ ಮಳೆಯಾಗಿದೆ.
ಗುರುವಾಯನಕೆರೆ ಶಾಲೆ ಪ್ರದೇಶ ಸೇರಿದಂತೆ ಮದ್ದಡ್ಕ ಪೇಟೆಯಲ್ಲಿ ಚರಂಡಿ ನೀರು ರಸ್ತೆಯಲ್ಲೇ ಹರಿದ ಪರಿಣಾಮ ರಸ್ತೆ ಸಂಚಾರಕ್ಕೆ ತೊಡಕುಂಟಾಯಿತು. ಆಲಂತಿಲ-ಸಬರಬೈಲು ಸಂಪರ್ಕ ರಸ್ತೆಯಲ್ಲಿ ನೀರು ಹರಿದು ವಾಹನ ಸಂಚಾರಕ್ಕೆ ಅಡಚಣೆಯಾಯಿತು. ರಸ್ತೆ ನೀರು ಅಂಗಡಿಗಳ ಒಳಗೆ ನುಗ್ಗಿತು. ಕಡಿರುದ್ಯಾವರ ಆಲಂದಡ್ಕದಲ್ಲಿ ತೋಡಿನ ನೀರು ಉಕ್ಕಿ ಹರಿದು ಸಮೀಪದ ಅಡಿಕೆ ತೋಟಗಳಿಗೆ ನುಗ್ಗಿದೆ.
ಸುಳ್ಯ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಉತ್ತಮ ಮಂಗಳವಾರ ಮಳೆಯಾಗಿದೆ. ಬೆಳ್ಳಾರೆ, ಇಂದ್ರಾಜೆ, ಕಲ್ಮಡ್ಕ ಸಹಿತ ವಿವಿಧ ಭಾಗಗಳಲ್ಲಿ ಧಾರಾಕಾರ ಮಳೆ ಸುರಿದಿದೆ. ಕೆಲವೆಡೆ ಹಾನಿ ಸಂಭವಿಸಿದೆ.