ಮಂಗಳೂರು: ಸುಳ್ಯದ ವ್ಯಕ್ತಿಯೊಡನೆ ಫೋನ್ ಸಂಭಾಷಣೆ ಮೂಲಕ ಮಾತಿನ ಚಕಮಕಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯ ಹೇಳಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಇಂದು ಸುಳ್ಯ ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ.
ಈ ಹಿನ್ನಲೆ ಮುಂಜಾನೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಡಿಕೆಶಿ ಮಾಧ್ಯಮಗಳ ಜೊತೆ ಮಾತನಾಡಿದರು. ನಾನು ಇಂಧನ ಸಚಿವನಾಗಿದ್ದಾಗ ಯಾರೋ ಓರ್ವ ತಲೆಹರಟೆ ಮಾಡಿ ಫೋನ್ ಮಾಡಿದ್ದು ನನ್ನೊಂದಿಗೆ ಬೇಕಾಬಿಟ್ಟಿ ಮಾತನಾಡಿದ್ದ. ಅವಾಚ್ಯ ಶಬ್ದಗಳಿಂದ ನನಗೆ ಬೈದಿದ್ದ. ನಮ್ಮ ಅಧಿಕಾರಿಗಳು ಅವನ ವಿರುದ್ಧ ದೂರು ನೀಡಿದ್ದರು.
ಈ ವಿಚಾರವಾಗಿ ಸಾಕ್ಷಿ ಹೇಳಲು ಬರುವಂತೆ ನ್ಯಾಯಾಲಯ ಹೇಳಿತ್ತು. ಪ್ರಾರಂಭದಲ್ಲಿ ನನಗೂ ಈ ಬಗ್ಗೆ ಗೊತ್ತಾಗಲಿಲ್ಲ. ಸದ್ಯ ಕೋರ್ಟ್ ಆದೇಶಕ್ಕೆ ತಲೆ ಬಾಗಿ ಬಂದಿದ್ದೇನೆ. ನಾವೇ ಕಾನೂನು ಮಾಡಿದವರು, ಕಾನೂನಿಗೆ ಬೆಲೆ ನೀಡದಿದ್ದರೆ ಹೇಗೆ ಎಂದು ಡಿಕೆಶಿ ಪ್ರಶ್ನಿಸಿದರು.
ಘಟನೆಯ ವಿವರ:
2016 ರಲ್ಲಿ ವಿದ್ಯುತ್ ಸಮಸ್ಯೆ ಕುರಿತು ಬೆಳ್ಳಾರೆಯ ಸಾಯಿ ಗಿರಿಧರ್ ಮತ್ತು ಅಂದಿನ ಇಂಧನ ಸಚಿವರಾಗಿದ್ದ ಡಿ.ಕೆ ಶಿವಕುಮಾರ್ ನಡುವೆ ಮಾತಿನ ಚಕಮಕಿ ನಡೆದಿತ್ತು. ಇದಾದ ಬಳಿಕ ಗಿರಿಧರ್ ಅವರನ್ನು ಬಂಧಿಸಿಲಾಗಿತ್ತು, ಆದರೆ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.
ಈ ಪ್ರಕರಣದಲ್ಲಿ ಸಾಕ್ಷ್ಯ ಹೇಳುವಂತೆ ಡಿಕೆಶಿಗೆ ಮೂರು ಬಾರಿ ಸಮನ್ಸ್ ನೀಡಿದ್ದರೂ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಸೆ.೨೯ ರಂದು ಹಾಜರಾಗುವಂತೆ ವಾರೆಂಟ್ ನೀಡಿದ್ದರೂ ಗೈರುಹಾಜರಾದ ಹಿನ್ನಲೆಯಲಿ ಮತ್ತೊಮ್ಮೆ ವಾರೆಂಟ್ ಜಾರಿ ಮಾಡಿತ್ತು. ಡಿಕೆಶಿ ಅವರನ್ನು ಕೋರ್ಟ್ ಮುಂದೆ ಹಾಜರುಪಡಿಸಲು ಐಜಿಪಿ ಹಾಗೂ ಡಿಐಜಿಗೆ ನೋಟಿಸ್ ಜಾರಿ ಮಾಡುವಂತೆ ಆದೇಶಿಸಿದ್ದರು. ಈ ಹಿನ್ನೆಲೆಯಲ್ಲಿ ಡಿಕೆಶಿ ಇಂದು ಕೋರ್ಟಿಗೆ ಹಾಜರಾಗಲು ಮಂಗಳೂರಿಗೆ ಬಂದಿದ್ದಾರೆ.