ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಅಕ್ರಮ ಮರಳುಗಾರಿಕೆ ರಾಜಾರೋಷವಾಗಿ ನಡೆಯುತ್ತಿದ್ದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಕೃಪೆಯಿಂದ ಯಾವುದೇ ದಾಳಿ ನಡೆಯುತ್ತಿಲ್ಲ. ಒಂದೊಮ್ಮೆ ಕಾಟಾಚಾರಕ್ಕೆ ದಾಳಿ ನಡೆದರೂ ಕೆಲವೇ ದಿನಗಳಲ್ಲಿ ಮತ್ತೆ ಎಂದಿನಂತೆ ದಂಧೆ ಮುಂದುವರಿಯುವುದು ಜನಸಾಮಾನ್ಯರನ್ನು ಹೈರಾಣಾಗಿಸಿದೆ. ಸುಬ್ರಮಣ್ಯ, ಧರ್ಮಸ್ಥಳದ ಬಳಿಕ ಸುಳ್ಯ ತಾಲೂಕಿನ ಅರಂತೋಡು ಬಳಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದು ದಿನವೊಂದಕ್ಕೆ ನೂರಾರು ಲೋಡ್ ಗಳಷ್ಟು ಮರಳು ಸಾಗಾಟವಾಗುತ್ತಿದೆ.
ಸುಳ್ಯ ತಾಲೂಕಿನ ಅರಂತೋಡು ಪೇಟೆ ದಾಟಿ ಮುಂದಕ್ಕೆ ಹೋಗುವಾಗ “ಕಾಮಧೇನು ಹೋಟೆಲ್” ಮುಂಭಾಗದ ರಸ್ತೆಯಲ್ಲಿ ಸಂಜೆಯಾದರೆ ಸಾಕು ಮರಳು ಸಾಗಾಟದ ಟಿಪ್ಪರ್ ಗಳದ್ದೇ ಹಾವಳಿ. ಮಲ್ಲಡ್ಕ ಎಂಬಲ್ಲಿ ಪಯಸ್ವಿನಿ ನದಿಯಲ್ಲಿ ನಡೀತಾ ಇರೋ ಅಕ್ರಮ ಮರಳು ಅಡ್ಡೆಯಿಂದಾಗಿ ಸಾರ್ವಜನಿಕ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಭಾರೀ ಗಾತ್ರದ ಟಿಪ್ಪರ್, ಹಿತಾಚಿ ಸಂಚಾರಕ್ಕೆ ಗ್ರಾಮದ ಕಿರಿದಾದ ಕಚ್ಚಾರಸ್ತೆ ಬಳಕೆಯಾಗುತ್ತಿದ್ದು ಇದರಿಂದ ಗ್ರಾಮದ ಜನರು ನಿದ್ದೆ ಕಳೆದುಕೊಂಡಿದ್ದಾರೆ. ರಾತ್ರಿಯಿಂದ ನಸುಕಿನವರೆಗೂ ಎಡೆಬಿಡದೆ ಮರಳು ಸಾಗಾಟ ನಡೆಯುತ್ತಿದ್ದು ಮಳೆಗಾಲದಲ್ಲಿ ರಸ್ತೆಯಲ್ಲಿ ಬೇರೆ ವಾಹನಗಳ ಸಂಚಾರವೇ ಅಸಾಧ್ಯವಾಗಿದೆ. ಮಲ್ಲಡ್ಕದಲ್ಲಿ ನದಿಯ ಪಕ್ಕದ ಮನೆಯ ಹಿಂಭಾಗದಲ್ಲೇ ಅಕ್ರಮ ಮರಳು ದಾಸ್ತಾನು ಇರಿಸಲಾಗಿದ್ದು ಗಣಿ ಇಲಾಖೆಗೆ ಗೊತ್ತಿದ್ದರೂ ದಾಳಿ ನಡೆಯುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಲ್ಲಿನ ಮರಳು ದಂಧೆಯ ಕುಳಗಳು ಜನಪ್ರತಿನಿಧಿಯೊಬ್ಬರ ಜೊತೆ ಗಳಸ್ಯ ಕಂಠಸ್ಯ ಸ್ನೇಹ ಹೊಂದಿದ್ದು ಬೆಂಗಳೂರು, ದಿಲ್ಲಿ ಜೊತೆಯಲ್ಲಿ ತಿರುಗಾಡುವ ಕಾರಣ ಸ್ಥಳೀಯ ಠಾಣಾ ಪೊಲೀಸರು ಅಕ್ರಮ ನೋಡಿಯೂ ಸುಮ್ಮನಿರುವ ಆರೋಪ ಸ್ಥಳೀಯರದ್ದಾಗಿದೆ.
ಇನ್ನು ಇದೇ ರಸ್ತೆಯಲ್ಲಿ ಮಡಿಕೇರಿ ಮಾರ್ಗವಾಗಿ ಮುಂದಕ್ಕೆ ತೆರಳಿದರೆ ಮರ್ಕಂಜ ಕ್ರಾಸ್ ರಸ್ತೆಗಿಂತ ಕೆಲವೇ ಮೀಟರ್ ಹಿಂದೆ ಖಾಸಗಿ ವ್ಯಕ್ತಿಯೊಬ್ಬ ತನ್ನ ತೋಟದಲ್ಲೇ ನದಿಯಲ್ಲಿ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದಾನೆ. ಹಗಲು ಹೊತ್ತು ತೋಟಕ್ಕೆ ಗೇಟ್ ಜಡಿದು ಸಂಜೆಯಾಗುತ್ತಿದ್ದಂತೆ ಗೇಟ್ ತೆರೆದು ಟಿಪ್ಪರ್ ಗಳ ಸಾಲು ಮರಳು ಹೇರಿಕೊಂಡು ಸಾಗುತ್ತಿದ್ದರೆ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸದ್ಯ ಮರಳುಗಾರಿಕೆ ನಿಂತಿದೆ. ಜಿಲ್ಲಾಡಳಿತ ಯಾರ್ಡ್ ಗಳಿಗೆ ಮರಳು ಸಾಗಾಟಕ್ಕೆ ಮಾತ್ರ ಅನುಮತಿ ನೀಡಿದೆ. ಹಾಗಿದ್ದರೂ ಇಲ್ಲಿಂದ ನೂರಾರು ಲೋಡ್ ಮರಳು ಸುಳ್ಯ, ಮಡಿಕೇರಿ ಭಾಗಕ್ಕೆ ಸಾಗಾಟವಾಗುತ್ತಿದ್ದು ಇದರ ಹಿಂದಿರುವ “ಪ್ರಭಾವಶಾಲಿ ಕೈ” ಯಾವುದು ಅನ್ನೋದು ಜನರ ಪ್ರಶ್ನೆ. ಪಯಸ್ವಿನಿ ನದಿಯಲ್ಲಿ ಮರಳು ದಂಧೆಯಿಂದ ಪ್ರಾಕೃತಿಕ ಸಮತೋಲನ ತಪ್ಪಿಹೋಗಿ ಮುಂದೊಂದು ದಿನ ಈ ಭಾಗದಲ್ಲೂ ಪ್ರವಾಹ ಪರಿಸ್ಥಿತಿ ತಲೆದೋರಿದರೆ ಅಚ್ಚರಿ ಪಡಬೇಕಿಲ್ಲ. ಹಾಗಾಗುವ ಮುನ್ನ ಜಿಲ್ಲಾಡಳಿತ, ಗಣಿ ಇಲಾಖೆ, ಪೊಲೀಸ್ ಇಲಾಖೆ ಮತ್ತು ಸ್ಥಳೀಯ ಜನಪ್ರತಿನಿಧಿಗಳು ಎಚ್ಚೆತ್ತು ದಂಧೆಗೆ ಶಾಶ್ವತ ಬ್ರೇಕ್ ಹಾಕಬೇಕಿದೆ.

ಧರ್ಮಸ್ಥಳದಲ್ಲಿ ಹಗಲು ಬಂದ್, ರಾತ್ರಿ ಓಪನ್!
ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟದಲ್ಲಿ ನಡೀತಿದ್ದ ಅಕ್ರಮ ಮರಳುಗಾರಿಕೆ ಹಗಲು ವೇಳೆ ನಿಂತಿದ್ದು ರಾತ್ರಿ ವೇಳೆ ಎಂದಿನಂತೆ ಮುಂದುವರಿದಿದೆ. ಮುಂಡಾಜೆ ಚಾರ್ಮಾಡಿ ರಸ್ತೆಯಲ್ಲಿ ಮರಳು ಸಾಗಾಟದ ಟಿಪ್ಪರ್ ಗಳು ಡ್ರೆಜಿಂಗ್ ಬಳಸಿ ತೆಗೆದ ಮರಳನ್ನು ಸಾಗಿಸುತ್ತಿದ್ದು ಇಲ್ಲಿನ ದಂಧೆ ಸಂಪೂರ್ಣ ನಿಲ್ಲೋದ್ಯಾವಾಗ ಎಂದು ಧರ್ಮಸ್ಥಳದ ನಾಗರಿಕರು ಪ್ರಶ್ನೆ ಮಾಡುತ್ತಿದ್ದಾರೆ. ಎಎಸ್ಪಿಯಾಗಿ ಖಡಕ್ ಆಫೀಸರ್ ಶಿವಂಶು ರಜಪುತ್ ಅಧಿಕಾರ ಸ್ವೀಕರಿಸಿದ್ದು ಈ ಭಾಗದ ಅಕ್ರಮ ದಂಧೆ ಮೆಟ್ಟಿನಿಲ್ಲುವ ವಿಶ್ವಾಸ ಜನರಲ್ಲಿದೆ. ನಿನ್ನೆ ಬೆಳ್ತಂಗಡಿ ವ್ಯಾಪ್ತಿಯಲ್ಲಿ ಮರಳು ಸಾಗಾಟದ ಟಿಪ್ಪರ್ ಹಿಡಿದಿದ್ದು ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ. ಧರ್ಮಸ್ಥಳ, ಸುಳ್ಯದಲ್ಲಿ ನಡಿಯೊಡಲು ಬಗೆಯುತ್ತಿರುವ ದಂಧೆ ಮಟ್ಟಹಾಕಲು ಸಂಬಂಧಪಟ್ಟ ಅಧಿಕಾರಿಗಳು ಮನಸು ಮಾಡಬೇಕಷ್ಟೆ.