ಮಡಿಕೇರಿ; ದಸರಾ ಮತ್ತು ಕರಗೋತ್ಸವದ ಪ್ರಯುಕ್ತ ಕೊಡಗು ಜಿಲ್ಲಾಡಳಿತ ಪ್ರವಾಸಿಗರ ಭೇಟಿಗೆ ನಿರ್ಬಂಧ ಹೇರಿದೆ. ಅಕ್ಟೋಬರ್ 7 ರಿಂದ 17ರ ತನಕ ಕೊಡಗು ಜಿಲ್ಲೆಯ ಪ್ರವಾಸಿ ತಾಣಗಳನ್ನು ಬಂದ್ ಮಾಡುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ಈ ಕುರಿತು ಕೊಡಗು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಆದೇಶ ಹೊರಡಿಸಿದ್ದಾರೆ.
ಮಡಿಕೇರಿ ದಸರಾ ಮತ್ತು ಕಾವೇರಿ ತೀರ್ಥೋದ್ಭವ ಕುರಿತು ಜಿಲ್ಲಾಡಳಿತದ ಜೊತೆ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಸಭೆ ನಡೆಸಿದರು. ನಾಡಿನ ಜೀವನದಿ ಕಾವೇರಿ ಉಗಮ ಸ್ಥಾನ ತಲಕಾವೇರಿಯಲ್ಲಿ ಅಕ್ಟೋಬರ್ 17 ರಂದು ಮಧ್ಯಾಹ್ನ 1.11 ಗಂಟೆಗೆ ತೀರ್ಥೋದ್ಭವ ನಡೆಯಲಿದೆ.
ಕೋವಿಡ್ ಪರಿಸ್ಥಿತಿ ಹಿನ್ನೆಲೆಯಲ್ಲಿ ಕಳೆದ ಬಾರಿಯಂತೆ ಈ ಬಾರಿಯೂ ಕೆಲವು ನಿಬಂಧನೆಗಳನ್ನು ಪಾಲಿಸುವಲ್ಲಿ ಸರ್ಕಾರದ ಜೊತೆ ಭಕ್ತಾಧಿಗಳು ಕೈಜೋಡಿಸುವಂತೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮನವಿ ಮಾಡಿದ್ದಾರೆ.
ಈ ಬಾರಿ ಅಕ್ಟೋಬರ್ 17ರ ಮಧ್ಯಾಹ್ನ 1.11 ಗಂಟೆಗೆ ತೀರ್ಥೋದ್ಭವ ನಡೆಯಲಿದೆ. ಹಾಗೆಯೇ ಸಾಲು-ಸಾಲು ರಜೆ ಇರುವುದರಿಂದ ಕೋವಿಡ್ ನಿಯಮ ಪಾಲಿಸಬೇಕಿದೆ. ಆದ್ದರಿಂದ ಭಕ್ತರು ಅಕ್ಟೋಬರ್ 17ರ ಮಧ್ಯಾಹ್ನ 2 ಗಂಟೆಯ ನಂತರ ಭಾಗಮಂಡಲದಿಂದ ತಲಕಾವೇರಿಗೆ ತೆರಳಬಹುದಾಗಿದೆ.