ನವದೆಹಲಿ: ದೇಶದಾದ್ಯಂತ ಇಂಧನ ದರ ಭಾನುವಾರವೂ ಹೆಚ್ಚಳವಾಗಿದ್ದು, ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಭಾನುವಾರ ಪೆಟ್ರೋಲ್ ದರವನ್ನು ಲೀಟರಿಗೆ 25 ಪೈಸೆ ಮತ್ತು ಡೀಸೆಲ್ ದರವನ್ನು ಲೀಟರಿಗೆ 30 ಪೈಸೆ ಹೆಚ್ಚಿಸಿವೆ.
ಸತತ ನಾಲ್ಕನೇ ದಿನವೂ ದೇಶಾದ್ಯಂತ ಮತ್ತೆ ತೈಲೋತ್ಪನ್ನಗಳ ದರ ಏರಿಕೆಯಾಗಿದ್ದು, ಭಾನುವಾರ ಪೆಟ್ರೋಲಿಯಂ ಉತ್ಪನ್ನಗಳು ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿವೆ. ಸರ್ಕಾರಿ ತೈಲ ಕಂಪನಿಗಳ ಅಕ್ಟೋಬರ್ 3 ರಂದು ಪೆಟ್ರೋಲ್, ಡೀಸೆಲ್ ಬೆಲೆಯನ್ನು ಏರಿಕೆ ಮಾಡಿದ್ದು, ಇಂದು ಲೀಟರ್ ಪೆಟ್ರೋಲ್ ದರ 25 ರಿಂದ 30 ಪೈಸೆ ಹೆಚ್ಚಳವಾಗಿದ್ದರೆ, ಪ್ರತೀ ಲೀಟರ್ ಡೀಸೆಲ್ ದರ 28 ರಿಂದ 30 ಪೈಸೆ ಹೆಚ್ಚಳವಾಗಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ದರ 102.39 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 90.77 ರೂಪಾಯಿ ಇದೆ. ಮುಂಬೈನಲ್ಲಿ ಲೀಟರ್ ಪೆಟ್ರೋಲ್ ದರ 108.43 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 98.48 ರೂಪಾಯಿ ಆಗಿದೆ. ಅದೇ ರೀತಿ ಕೋಲ್ಕತ್ತಾದಲ್ಲಿ ಲೀಟರ್ ಪೆಟ್ರೋಲ್ ದರ 103.04 ರೂಪಾಯಿ ಹಾಗೂ ಲೀಟರ್ ಡಿಸೆಲ್ ದರ 93.54 ರೂಪಾಯಿಗೆ ಏರಿಕೆಯಾಗಿದೆ. ಚೆನ್ನೈನಲ್ಲಿ ಲೀಟರ್ ಪೆಟ್ರೋಲ್ ದರ 99.98 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 95.28 ರೂಪಾಯಿಗೆ ಏರಿಕೆ ಆಗಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ದರ 105.91 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 96.3 ರೂಪಾಯಿಗೆ ಏರಿಕೆ ಆಗಿದೆ.
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲೋತ್ಪನ್ನಗಳ ಮೂಲದರದಲ್ಲಿ ಭಾರೀ ವ್ಯತ್ಯಾಸ ಆಗದಿದ್ದರೂ ತೈಲ ಕಂಪನೆಗಳು ಈ ಏರಿಕೆಗೆ ಅಂತರರಾಷ್ಟ್ರೀಯ ಮಾರುಕಟ್ಟೆಯನ್ನೇ ಬೊಟ್ಟು ಮಾಡುತ್ತಿವೆ. ಕೆಲವೇ ದಿನಗಳಲ್ಲಿ ಡೀಸೆಲ್ ಕೂಡಾ ಮತ್ತೆ ಸೆಂಚುರಿ ಬಾರಿಸುವ ತವಕದಲ್ಲಿದ್ದು, ಜನಸಾಮಾನ್ಯರಿಗೆ ತೈಲದರಗಳು ಬಿಸಿತುಪ್ಪವಾಗಿವೆ. ಕಾರಣವಿಲ್ಲದೆ ತೈಲದರವನ್ನು ನಿರಂತರವಾಗಿ ಏರಿಸುತ್ತಿರುವ ಸರ್ಕಾರದ ನಿರ್ಧಾರ ಅಚ್ಚರಿಗೆ ಕಾರಣವಾಗಿದ್ದು, ದೇಶವಾಸಿಗಳ ಮೇಲೆ ನಡೆಯುತ್ತಿರುವ ಹಗಲು ದರೋಡೆ ಎಂದೇ ಪರಿಗಣಿಸಲಾಗುತ್ತಿದೆ.