ಮುಂಬೈ: ಪಾರ್ಟಿಯೊಂದರಲ್ಲಿ ಡ್ರಗ್ಸ್ ಬಳಕೆ ಮಾಡುತ್ತಿರುವ ಮಾಹಿತಿಯನ್ನು ಆಧರಿಸಿ ಶನಿವಾರ ರಾತ್ರಿ ರಾಷ್ಟ್ರೀಯ ಮಾದಕ ವಸ್ತು ನಿಯಂತ್ರಣ ಘಟಕದ (ಎನ್‌ಸಿಬಿ) ಅಧಿಕಾರಿಗಳು ಪ್ರಯಾಣಿಕರ ಕ್ರೂಸ್ ಹಡಗಿನ ಮೇಲೆ ದಾಳಿ ನಡೆಸಿದ್ದಾರೆ.
ನೂರಾರು ಮಂದಿ ಪ್ರಯಾಣಿಕರಿದ್ದ ಹಡಗು ಗೋವಾ ಕಡೆಗೆ ಸಾಗುವುದಿತ್ತು. ಹಡಗಿನಲ್ಲಿ ಪಾರ್ಟಿ ನಡೆಯುತ್ತಿರುವ ಮಾಹಿತಿಯನ್ನು ಆಧರಿಸಿ ಸಮೀರ್ ವಾಂಖೆಡೆ ನೇತೃತ್ವದ ಎನ್‌ಸಿಬಿಯ ತಂಡವು ಹಡಗಿನಲ್ಲಿ ಶೋಧ ಕಾರ್ಯ ನಡೆಸಿರುವುದಾಗಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಾಲಿವುಡ್ ನಟ ಶಾರೂಕ್ ಖಾನ್ ಪುತ್ರ ಆರ್ಯನ್ ಖಾನ್ ಸೇರಿ ಹಲವರನ್ನು ಬಂಧಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಕೆಲವು ಪ್ರಯಾಣಿಕರಿಂದ ನಿಷೇಧಿತ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಹಾಗೂ ಯಾವುದೇ ಪ್ರಯಾಣಿಕರಿಗೆ ಹಡಗಿನಿಂದ ಹೊರಹೋಗಲು ಅವಕಾಶ ನೀಡಿಲ್ಲ, ತನಿಖೆ ಮುಂದುವರಿಸಲಾಗಿದೆ ಎಂದಿದ್ದಾರೆ.
‘ಡ್ರಗ್ಸ್ ವಶಕ್ಕೆ ಪಡೆಯಲಾಗಿದ್ದು, 8-10 ಜನರನ್ನು ವಿಚಾರಣೆಗೆ ಒಳಪಡಿಸಿದ್ದೇವೆ’ ಎಂದು ಸಮೀರ್ ವಾಂಖೆಡೆ ಹೇಳಿರುವುದಾಗಿ ಎಎನ್‌ಐ ಟ್ವೀಟಿಸಿದೆ. ಆದರೆ ಸ್ಪಷ್ಟ ಮಾಹಿತಿಯನ್ನು ನಿರಾಕರಿಸಿದೆ.
ಸಮುದ್ರ ಮಧ್ಯದಲ್ಲಿ ಪಾರ್ಟಿಗೆ ನಡೀತಿತ್ತು ಪ್ಲ್ಯಾನ್!
ಕಾರ್ಡೆಲಿಯಾ ಎಂಪ್ರೆಸ್ ಹಡಗಿನಲ್ಲಿ ಅಕ್ಟೋಬರ್ 2ರಿಂದ ಅಕ್ಟೋಬರ್ 4ರ ವರೆಗೂ ಪಾರ್ಟಿ ಆಯೋಜನೆಯಾಗಿತ್ತು. ‘ಸಂಗೀತದ ಯಾನ’ ಎಂಬರ್ಥದಲ್ಲಿ ಪಾರ್ಟಿಗೆ ನೂರು ಟಿಕೆಟ್‌ಗಳನ್ನು ಮಾರಾಟ ಮಾಡಲಾಗಿತ್ತು ಹಾಗೂ ಆಯೋಜಕರ ಮೂಲಕ ಪಾಸ್‌ಗಳು ವಿತರಣೆಯಾಗಿದ್ದವು ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ಮೂಲಗಳ ಪ್ರಕಾರ, ಕಾರ್ಯಕ್ರಮವನ್ನು ಫ್ಯಾಷನ್ ಟಿವಿ ಇಂಡಿಯಾ ಮತ್ತು ದೆಹಲಿ ಮೂಲದ ನಮಸ್ಕ್ರೇ ಎಕ್ಸ್‌ಪೀರಿಯನ್ಸ್ ಆಯೋಜಿಸಿತ್ತು. ಇರುವ ಸ್ಥಳಾವಕಾಶಕ್ಕಿಂತಲೂ ಹೆಚ್ಚುವರಿ ಬುಕ್ಕಿಂಗ್ ಆಗಿ ಹಲವು ಮಂದಿ ಹಡಗಿನ ಒಳಗೆ ಪ್ರವೇಶಿಸಲು ಸಾಧ್ಯವಾಗದೆ ನಿಂತಿದ್ದರು. ವ್ಯಕ್ತಿಯೊಬ್ಬರು ‘₹82 ಸಾವಿರ ಕೊಟ್ಟು ಪಾಸ್ ಖರೀದಿಸಿದ್ದೇನೆ, ಒಳಗೆ ಪ್ರವೇಶ ಸಿಕ್ಕಿಲ್ಲ’ ಎಂದು ಹೇಳಿರುವುದಾಗಿ ವರದಿಯಾಗಿದೆ.