ಪುತ್ತೂರು: ಇಲ್ಲಿನ ಕೊಳ್ತಿಗೆ ಗ್ರಾಮದ ಕುಂಟಿಕಾನದಲ್ಲಿ ಮುಸ್ಲಿಂ ಯುವಕನ ಮನೆಯಲ್ಲಿದ್ದ ಹಿಂದು ಯುವತಿಯು ಇದೀಗ ಆಕೆಯ ಇಚ್ಛೆಯಂತೆ ಆತನ ಜೊತೆಗೆ ಹೊಸಬಾಳಿಗೆ ತುದಿಗಾಲಲ್ಲಿ ನಿಂತಿರುವುದಾಗಿ ವರದಿಯಾಗಿದೆ. ಆಕೆಯನ್ನು ಸ್ವಧರ್ಮದಲ್ಲಿ ಉಳಿಸಿಕೊಳ್ಳಲು ಹಿಂದೂ ಸಂಘಟನೆಗಳ ಕಾರ್ಯಕರ್ತರು ಅವಿರತ ಶ್ರಮ ವಹಿಸುತ್ತಿದ್ದಾರೆ
ಕೇರಳದ ಆದೂರು ಪೊಲೀಸ್ ಠಾಣಾ ವ್ಯಾಪ್ತಿಯ ದೇಲಂಪಾಡಿ ಕಲ್ಲಡ್ಕ ದಿಂದ ನಾಪತ್ತೆಯಾದ ಯುವತಿಯನ್ನು ನಿನ್ನೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಪ್ರಬುದ್ದಳಾದ ಆಕೆಗೆ ಅವಳ ಇಚ್ಛೆಯಂತೆ ನಡೆಯಲು ಅವಕಾಶ ಕೊಡಲಾಗಿತ್ತು.
ದೇಲಂಪಾಡಿ ಕಲ್ಲಡ್ಕ ನಿವಾಸಿ ಭವ್ಯಶ್ರೀ ಬುಧವಾರ ಸೆ.29 ರಂದು ಮನೆಯಿಂದ ನಾಪತ್ತೆಯಾಗಿದ್ದಳು. ಈ ಹಿನ್ನೆಲೆಯಲ್ಲಿ ತಂದೆ ಬಾಬು ಆದೂರು ಪೊಲೀಸರಿಗೆ ದೂರು ನೀಡಿದ್ದರು.
ಈ ಮಧ್ಯೆ ಬೆಳ್ಳಾರೆ ಠಾಣೆಯ ವ್ಯಾಪ್ತಿಯ ಕೊಳ್ತಿಗೆ ಗ್ರಾಮದ ಕುಂಟಿಕಾನದಲ್ಲಿ ಅಬೂಬಕರ್ ಸಿದ್ದಿಕ್ ನ ಮನೆಯಲ್ಲಿ ಯುವತಿಯೊಬ್ಬಳು ಇದ್ದಾಳೆಂದು ತಿಳಿದು ಸ್ಥಳೀಯರು ಸೇರಿದ್ದು, ಮಾಹಿತಿ ತಿಳಿದು ಆಗಮಿಸಿದ ಬೆಳ್ಳಾರೆ ಪೊಲೀಸರು ಯುವಕನನ್ನು ಕೊಳ್ತಿಗೆಯಿಂದ,ಯುವತಿಯನ್ನು ಜಾಲ್ಸೂರಿನಿಂದ ವಶಪಡಿಸಿ ಠಾಣೆಗೆ ಒಯ್ದರು. ಈ ಮಧ್ಯೆ ಯುವತಿಗೆ 18 ವರ್ಷ ಪೂರ್ತಿಗೊಂಡಿಲ್ಲವೆಂಬ ಶಂಕೆಯೂ ಉಂಟಾಗಿತ್ತು.
ಆತ ಆಕೆಯನ್ನು ಬೇರೆಯವರ ಮೂಲಕ ಜಾಲ್ಸೂರಿಗೆ ಕರೆದುಕೊಂಡು ಹೋಗಿ ಬಿಟ್ಟು ಬಂದಿದ್ದ ಎನ್ನಲಾಗಿದೆ. ಅಲ್ಲಿ ಸಾರ್ವಜನಿಕರು ಸಂಶಯಗೊಂಡು ಆಕೆಯನ್ನು ವಿಚಾರಿಸಿದಾಗ ಆಕೆ ಘಟನೆ ವಿವರಿಸಿದ್ದು,ಬಳಿಕ ಬೆಳ್ಳಾರೆ ಪೊಲೀಸರಿಗೆ ಮಾಹಿತಿ ನೀಡಿ ಅವರ ಸುಪರ್ದಿಗೆ ನೀಡಲಾಯಿತು ಎನ್ನಲಾಗಿದೆ.
ಇಬ್ಬರನ್ನು ಅನಂತರ ಆದೂರು ಪೊಲೀಸರಿಗೆ ಹಸ್ತಾಂತರಿಸಲಾಯಿತು.
ಆದೂರು ಪೊಲೀಸರು ನಡೆಸಿದ ತನಿಖೆಯಲ್ಲಿ ಭವ್ಯಶ್ರೀಗೆ 18 ವರ್ಷ ಪೂರ್ತಿಗೊಂಡಿದೆಯೆಂದು ತಿಳಿದು ಬಂತು. ಈ ಹಿನ್ನೆಲೆಯಲ್ಲಿ ಆಕೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ತಾನು ಅಬೂಬಕರ್ ಸಿದ್ದಿಖ್ ಜತೆ ತೆರಳುವುದಾಗಿ ಆಕೆ ಹೇಳಿದ್ದಳೆನ್ನಲಾಗಿದೆ. ಆಕೆಯ ಇಚ್ಛೆಯಂತೆ ತೆರಳಲು ನ್ಯಾಯಾಲಯ ಅನುಮತಿ ನೀಡಿತು. ಈ ಪ್ರಕರಣದಿಂದ ಆದೂರು ಹಾಗೂ ಬೆಳ್ಳಾರೆಯಲ್ಲಿ ಬಿಗು ಪರಿಸ್ಥಿತಿಗೆ ಉಂಟಾಗಿತ್ತು.
ಈ ನಡುವೆ ಕೋರ್ಟ್‌ನಲ್ಲಿ ಆಕೆ ಸಿದ್ದೀಕ್ ಜತೆ ಹೋಗುವುದಾಗಿ ಹೇಳಿದ್ದರಿಂದ ಆಕೆಯ ಇಚ್ಚೆಯಂತೆಯೇ ನ್ಯಾಯಾಲಯ ಆಕೆಗೆ ಅವಕಾಶ ನೀಡಿದೆ. ಆದರೆ ಹಿಂದು ಜಾಗರಣ ವೇದಿಕೆ ಯ ಕಾರ್ಯಕರ್ತರು ಆಕೆಯನ್ನು ಅವಳ ಮನೆಯಲ್ಲೇ ಇರುವಂತೆ ಮಾಡುವಲ್ಲಿ ಪ್ರಯತ್ನ ಮಾಡಿದ್ದಾರೆ. ಹಿಂದು ಜಾಗರಣ ವೇದಿಕೆ ಯ ಕಾರ್ಯಕರ್ತರು ಅವಳನ್ನು ಹಿಂದೂ ಧರ್ಮದಲ್ಲೇ ಉಳಿಸಲು ಎಲ್ಲಾ ರೀತಿಯಲ್ಲಿಯೂ ಶಕ್ತಿ ಮೀರಿ ಪ್ರಯತ್ನ ನಡೆಸುತ್ತಿದ್ದಾರೆ.
ಒಟ್ಟಾರೆ ಪ್ರೀತಿಗಾಗಿ ಧರ್ಮಬಂಧನ ಕಳಚಿದ ಯುವತಿಯ ಮುಂದಿನ ಜೀವನ ಏನಾಗುತ್ತೋ ಕಾದುನೋಡಬೇಕಿದೆ.