ಮಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಮೂರು ದಿನಗಳ ಅಮೆರಿಕ ಪ್ರವಾಸ ಕೈಗೊಂಡಿದ್ದರು. ಈ ಸಂದರ್ಭದಲ್ಲಿ ಮೂರು ದಿನಗಳ ಕಾಲ ಹೋಟೆಲ್ನಲ್ಲಿ ತಂಗಿದ್ದ ನರೇಂದ್ರ ಮೋದಿ ಅವರಿಗೆ ಆತಿಥ್ಯ ನೀಡಿದ ತಂಡದ ನೇತೃತ್ವವನ್ನು ಮಂಗಳೂರಿನ ಯುವತಿ ಸುಮಲ್ ಸಂದೀಪ್ ಕೋಟ್ಯಾನ್ ವಹಿಸಿಕೊಂಡಿದ್ದರು. ನರೇಂದ್ರ ಮೋದಿ ಅವರ ಜೊತೆಗಿನ ಮೂರು ದಿನಗಳ ಅನುಭವವನ್ನು ಮನೆಯವರ ಮುಂದೆ ಸುಮಲ್ ತೆರೆದಿಟ್ಟಿದ್ದು ನರೇಂದ್ರ ಮೋದಿ ಅವರಿಗೆ ಎರಡನೇ ಬಾರಿ ಆತಿಥ್ಯ ನೀಡಿದ ಖುಷಿಯನ್ನು ಹಂಚಿಕೊಂಡಿದ್ದಾರೆ.
ಸುಮಲ್ ಸಂದೀಪ್ ಕೋಟ್ಯಾನ್ ಮಂಗಳೂರಿನ ಮೇರಿಹಿಲ್ ನಿವಾಸಿಗಳಾದ ಗೋಪಾಲ್ ಮತ್ತು ಸುಪಲಾ ದಂಪತಿಯ ಪ್ರಥಮ ಪುತ್ರಿ. ಆತಿಥ್ಯದಲ್ಲಿ ಹೆಸರುವಾಸಿಯಾದ ಮಂಗಳೂರಿನ ದಂಪತಿಯ ಮಗಳು, ದೇಶದ ಪ್ರಧಾನಿ ಗೆ ಎರಡನೇ ಬಾರಿ ಆತಿಥ್ಯ ನೀಡಿರೋದು ಮನೆಯವರಿಗೂ ಖುಷಿ ತಂದಿದೆ. ಅಮೆರಿಕಾದಲ್ಲಿ ಪ್ರಧಾನಿ ಮೋದಿ ಹಾಗೂ ಭಾರತದ ಗಣ್ಯ ವ್ಯಕ್ತಿಗಳ ಆತಿಥ್ಯದ ಜವಾಬ್ದಾರಿಯನ್ನು ಕರಾವಳಿ ಮೂಲದ ಆನಂದ ಪೂಜಾರಿಯವರ ಜುವೆಲ್ಸ್ ಆಫ್ ಇಂಡಿಯಾ ವುಡ್ಲ್ಯಾಂಡ್ಸ್ ಡಿಸಿ ಹೋಟೆಲ್ಗೆ ವಹಿಸಲಾಗಿತ್ತು. ಹೀಗಾಗಿ, ಸುಮಲ್ ಕೋಟ್ಯಾನ್ ಅವರು ಆತಿಥ್ಯ ನೀಡುವ ತಂಡದಲ್ಲಿದ್ದರು. ಮೋದಿ ಆತಿಥ್ಯದ ತಂಡದಲ್ಲಿ 8 ಮಂದಿ ಇದ್ದರು. ದಕ್ಷಿಣ ಭಾರತದ ಇಡ್ಲಿ, ಸಾಂಬಾರ್ ತಿಂದು ಮೋದಿ ಸಂತೋಷಪಟ್ಟರು. ಪ್ರಧಾನಿ ‘ಮಗಳೇ’ ಎಂದು ಸಂಬೋಧಿಸಿ ಮಾತನಾಡುತ್ತಿರುವುದು ಸಂತೋಷ ತಂದಿದೆ. ಪ್ರಧಾನಿಯವರ ಸರಳತೆ, ಸಹೃದಯತೆ ಕಂಡು ನಿಜಕ್ಕೂ ಖುಷಿಯಾಗಿದೆ ಎಂದು ಸುಮಲ್ ಕೋಟ್ಯಾನ್ ತಮ್ಮ ಕುಟುಂಬಸ್ಥರಲ್ಲಿ ಸಂತಸ ಹಂಚಿಕೊಂಡಿದ್ದಾರೆ.

ಪ್ರಧಾನಿ ಆಶೀರ್ವಾದ ಪಡೆದ ಸುಮಲ್ ಕೋಟ್ಯಾನ್ 2017 ರಲ್ಲಿ ಮೋದಿಯವರು ಅಮೆರಿಕಾಗೆ ಭೇಟಿ ನೀಡಿದ ಸಂದರ್ಭದಲ್ಲಿ ಆತಿಥ್ಯ ನೀಡಿರುವ ತಂಡದಲ್ಲಿ ಸುಮಲ್ ಕೋಟ್ಯಾನ್ ಇದ್ದರು. ಗೋಪಾಲ ಪೂಜಾರಿ ಹಾಗೂ ಸುಫಲಾ ಎಂಬುವರ ಪುತ್ರಿಯಾಗಿ ನಗರದ ಮೇರಿಹಿಲ್‌ನಲ್ಲಿ ಜನಿಸಿರುವ ಸುಮಲ್ ಅವರು, ಮಂಗಳೂರಿನ ಅನಾಸ್‌ನಲ್ಲಿ ಪ್ರಾಥಮಿಕ ಶಿಕ್ಷಣ ಹಾಗೂ ಕಾರ್ಮೆಲ್ ಶಾಲೆಯಲ್ಲಿ ಪ್ರೌಢ ಶಿಕ್ಷಣ ಪೂರೈಸಿದ್ದಾರೆ. ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪಿಯುಸಿ ಮತ್ತು ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಉನ್ನತ ಶಿಕ್ಷಣ ಪಡೆದಿದ್ದಾರೆ. ಸಂದೀಪ್ ಕೋಟ್ಯಾನ್ ಅವರನ್ನು ವಿವಾಹವಾಗಿರುವ ಸುಮಲ್ ಕೋಟ್ಯಾನ್ 9 ವರ್ಷಗಳಿಂದ ಅಮೆರಿಕಾದ ವಾಷಿಂಗ್ಟನ್ ಡಿಸಿಯಲ್ಲಿ ವಾಸವಾಗಿದ್ದಾರೆ.
ಹೋಟೆಲ್ ಉದ್ಯಮದಲ್ಲಿ ಆಸಕ್ತರಾಗಿರುವ ಸುಮಲ್ ಕೋಟ್ಯಾನ್ ವಾರಾಂತ್ಯದ ದಿನಗಳಲ್ಲಿ ಕರಾವಳಿ ಮೂಲದ ಆನಂದ ಪೂಜಾರಿಯವರ ಜುವೆಲ್ಸ್ ಆಫ್ ಇಂಡಿಯಾ ವುಡ್ ಲ್ಯಾಂಡ್ಸ್ ಡಿಸಿ ಹೋಟೆಲ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸುಮಲ್ ಕೋಟ್ಯಾನ್ ಅವರಿಗೆ ಮೋದಿಯವರ ಆತಿಥ್ಯದ ಅವಕಾಶ ದೊರಕಿದೆ. ಆನಂದ್ ರೆಸ್ಟೋರೆಂಟ್ ಮೋದಿಯವರು ನಾಲ್ಕು ಬಾರಿ ಅಮೆರಿಕಾ ಪ್ರವಾಸ ಮಾಡಿದ ಸಂದರ್ಭದಲ್ಲಿಯೂ ಆತಿಥ್ಯವನ್ನು ನೀಡಿದೆ.
ಒಟ್ಟಿನಲ್ಲಿ ಮಂಗಳೂರು ಮೂಲದ ಯುವತಿ ಸುಮಲ್ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಆತಿಥ್ಯ ನೀಡುವ ಮೂಲಕ ಸುದ್ದಿಯಾಗಿದ್ದಾರೆ. ಮೋದಿಯವರ ಸರಳತೆಯನ್ನು ಸುಮಲ್ ಕೊಂಡಾಡಿದ್ದು, ಪ್ರತೀ ಬಾರಿ ಆತಿಥ್ಯದ ಅವಕಾಶ ನನಗೇ ಸಿಗಲಿ ಅಂತಾ ಸುಮಲ್ ಹೇಳಿಕೊಂಡಿದ್ದಾರೆ.