ಬೆಂಗಳೂರು: 40 ವರ್ಷ ಮೇಲ್ಪಟ್ಟ ಪುರುಷರು ಹಾಗೂ 45 ವರ್ಷ ಮೇಲ್ಪಟ್ಟ ಮಹಿಳೆಯರು ಪ್ರತಿ ವರ್ಷ ತಮ್ಮ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುವ ಬದಲು ಮೆಡಿಕಲ್ ಚೆಕಪ್ ವಾರ್ಷಿಕೋತ್ಸವ ಆಚರಿಸಿಕೊಂಡರೆ ಹೃದಯಾಘಾತ ಆಗುವುದರಿಂದ ಬಚಾವ್ ಆಗಬಹುದು ಎಂದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಇಂದಿಲ್ಲಿ ಹೇಳಿದರು. ಬಿಬಿಎಂಪಿ ಮತ್ತು ಜಯದೇವ ಹೃದ್ರೋಗ ಸಂಸ್ಥೆ ಸಹಯೋಗದಲ್ಲಿ ಬಾಬು ಜಗಜೀವನರಾಮ್ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ಹೃದಯ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಒಂದೇ ಜಾಗದಲ್ಲಿ ಸತತ 4 ಗಂಟೆಗಳ ಕಾಲ ಕುಳಿತು ಕೆಲಸ ಮಾಡಿದರೆ ಒಂದು ಸಿಗರೇಟ್ ಸೇದಿದಷ್ಟೇ ಸಮ. ಹಾಗಾಗಿ ಒಂದೇ ಕಡೆ ಕೂರುವ ಬದಲು ದುಡಿದು ತಿನ್ನಬೇಕು. ಶ್ರಮವಹಿಸಿದರೆ ಆಗ ಹೃದಯಘಾತದಿಂದ ತಪ್ಪಿಸಿಕೊಳ್ಳಬಹುದು ಎಂದು ಹೇಳಿದರು. ಬಿಪಿ, ಶುಗರ್, ಕೊಲೆಸ್ಟ್ರಾಲ್, ತೂಕ ಹೆಚ್ಚಳ, ಸೊಂಟದ ಸುತ್ತಳತೆಯಲ್ಲಿ ನಿಯಂತ್ರಣ ಇಟ್ಟುಕೊಳ್ಳುವುದರ ಜೊತೆಗೆ ಅತಿಯಾಸೆಯನ್ನು ಬಿಡಬೇಕು. ಆಗ ಹೃದಯವನ್ನು ಕಾಪಾಡಿಕೊಳ್ಳಬಹುದು ಎಂದು ತಿಳಿಸಿದರು.
ಪ್ರತಿದಿನ ವ್ಯಾಯಾಮ ಮಾಡಬೇಕು, ಶ್ರಮಪಟ್ಟು ಕೆಲಸ ಮಾಡಬೇಕು, 40 ವರ್ಷ ಮೇಲ್ಪಟ್ಟ ಪುರುಷರು, 45 ವರ್ಷ ಮೇಲ್ಪಟ್ಟ ಮಹಿಳೆಯರು ಪ್ರತಿ ವರ್ಷ ವೈದ್ಯಕೀಯ ತಪಾಸಣೆ ಮಾಡಿಸಿಕೊಂಡರೆ ಹೃದಯಾಘಾತದಿಂದ ಪಾರಾಗಬಹುದು ಎಂದು ಹೇಳಿದರು.