ಕಡಬ: ಅತ್ಯಾಚಾರ ಆರೋಪ ಹೊತ್ತಿರುವ ಕಡಬ ಠಾಣಾ ಪೊಲೀಸ್ ಸಿಬಂದಿ ಶಿವರಾಜ್ ಬಂಧನಕ್ಕೆ ಒಳಗಾಗಿದ್ದು, ಆತನನ್ನು ಸೇವೆಯಿಂದ ಅಮಾನತು ಗೊಳಿಸಲಾಗಿದೆ. ಆರೋಪಿಯನ್ನು ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆರೋಪಿ ಶಿವರಾಜ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಲಾಗಿದೆ ಎಂದು ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ ಹೇಳಿದರು.
ಸಂತ್ರಸ್ತ ಯುವತಿ ಹಾಗೂ ಆಕೆಯ ತಾಯಿಯನ್ನು ಪತ್ತೆ ಹಚ್ಚಲಾಗಿದೆ. ಪ್ರಕರಣ ಗಂಭೀರತೆಯ ಹಿನ್ನೆಲೆಯಲ್ಲಿ ಕಡಬ ಠಾಣೆಗೆ ಆಗಮಿಸಿರುವ ಐಜಿಪಿಯವರು ಆರೋಪಿ ಶಿವರಾಜ್‌ನನ್ನು ಹಾಗೂ ಆತನ ಜತೆ ಹೆಚ್ಚು ನಿಕಟವಾಗಿದ್ದ ಪೊಲೀಸ್ ಸಿಬಂದಿಯನ್ನೂ ವಿಚಾರಣೆ ನಡೆಸಿದ್ದಾರೆ.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಜಿಲ್ಲಾ ಎಸ್ಪಿ ಋಷಿಕೇಶ್ ಭಗವಾನ್ ಸೋನಾವಣೆ, ಯುವತಿಯ ತಂದೆಯ ದೂರಿನ ಆಧಾರದಲ್ಲಿ ಶಿವರಾಜ್‌ನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದರು. ಆರೋಪಿಯನ್ನು ಬಂಧಿಸಿ ಆತನನ್ನು ಅಮಾನತಿನಲ್ಲಿಟ್ಟು ತನಿಖೆ ನಡೆಸ ಲಾಗುತ್ತಿದೆ. ಪ್ರಾಥಮಿಕ ತನಿಖೆ ನಡೆದಿದೆ. ಸಾಕ್ಷ್ಯಾಧಾರ ಸಂಗ್ರಹಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು. ಎಎಸ್ಪಿ ಶಿವ ಕುಮಾರ್ ಗುಣಾರೆ, ಎಎಸ್ಪಿ ಗಾನಾ ಪಿ. ಕುಮಾರ್, ಪ್ರಭಾರ ಎಸ್‌ಐ ಕುಮಾರ್ ಕಾಂಬ್ಳೆ ಉಪಸ್ಥಿತರಿದ್ದರು.
ಮದುವೆ ಮಾಡಿಸಲು ಆಗ್ರಹ
ಐಜಿಪಿ ದೇವಜ್ಯೋತಿ ರೇ ಅವರನ್ನು ಠಾಣೆಯಲ್ಲಿ ಭೇಟಿಯಾದ ವಿಶ್ವ ಹಿಂದೂ ಪರಿಷತ್‌ನ ಮಹಿಳಾ ಸಂಘಟನೆ ಮಾತೃಶಕ್ತಿ ಕಡಬ ಪ್ರಖಂಡದ ಮುಖ್ಯಸ್ಥರು ಆರೋಪಿ ಶಿವರಾಜ್‌ನಿಗೆ ಸಂತ್ರಸ್ತ ಯುವತಿಯೊಂದಿಗೆ ಮದುವೆ ಮಾಡಿಸಿ ಆಕೆಗೆ ಬಾಳು ಕೋಡಬೇಕೆಂದು ಅಗ್ರಹಿಸಿದರು.
ಪುತ್ತೂರು ತಾ.ಪಂ. ಮಾಜಿ ಅಧ್ಯಕ್ಷೆ ಪುಲಸ್ತ್ಯ ರೈ, ಮಾತೃಶಕ್ತಿ ಕಡಬ ಪ್ರಖಂಡ ಅಧ್ಯಕ್ಷೆ ಗೀತಾ ಅಮೈ, ಜಿ.ಪಂ. ಮಾಜಿ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ ಉಪಸ್ಥಿತರಿದ್ದರು. ವಿಹಿಂಪ ಜಿಲ್ಲಾ ಕಾರ್ಯಾಧ್ಯಕ್ಷ ಭಾಸ್ಕರ ಧರ್ಮಸ್ಥಳ, ಕಾರ್ಯದರ್ಶಿ ನವೀನ್ ನೆರಿಯ, ಕಡಬ ಪ್ರಖಂಡ ಅಧ್ಯಕ್ಷ ರಾಧಾಕೃಷ್ಣ ಕೋಲ್ಪೆ, ಕಾರ್ಯದರ್ಶಿ ಪ್ರಮೋದ್ ರೈ ನಂದಗುರಿ, ಪ್ರಮುಖರಾದ ಸಂತೋಷ್ ಸುವರ್ಣ ಕೋಡಿಬೈಲು, ಜಯಂತ ಕಲ್ಲುಗುಡ್ಡೆ ಮತ್ತಿತರರು ಉಪಸ್ಥಿತರಿದ್ದರು.
ಆರೋಪಿ ರಕ್ಷಣೆ ವದಂತಿ, ನಿರಾಕರಿಸಿದ ಎಸ್ಪಿ’
ಆರೋಪಿಯನ್ನು ರಕ್ಷಿಸುವ ಹುನ್ನಾರ ನಡೆಯುತ್ತಿದೆ ಎಂಬ ಗುಮಾನಿಯಿದೆ ಪತ್ರಕರ್ತರು ಕೇಳಿದ್ದು ಉತ್ತರಿಸಿದ ಎಸ್ಪಿ, ಆರೋಪಿಯನ್ನು ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ಆತನ ಬಗ್ಗೆ ಇತರ ದೂರುಗಳಿದ್ದರೆ ತನಿಖೆ ನಡೆಸ ಲಾಗುವುದು ಎಂದರು. ಅಜ್ಞಾತ ಸ್ಥಳದಲ್ಲಿದ್ದಾರೆ ಎನ್ನಲಾದ ಯುವತಿ ಹಾಗೂ ತಾಯಿಯನ್ನು ಪತ್ತೆ ಹಚ್ಚಿ ಅವರನ್ನು ವೈದ್ಯಕೀಯ ತಪಾಸಣೆ ನಡೆಸಲಾಗುತ್ತಿದೆ ಎಂದರು.