ಪುತ್ತೂರು: ಅನ್ಯಮತೀಯ ಯುವಕನೋರ್ವನ ಮನೆಯಲ್ಲಿ ಹಿಂದೂ ಯುವತಿ ಇರುವ ಮಾಹಿತಿ ದೊರೆತು ಸಾರ್ವಜನಿಕರು ಮನೆಯ ಮುಂಭಾಗ ಸೇರಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಬೆಳ್ಳಾರೆ ಠಾಣಾ ವ್ಯಾಪ್ತಿಯ ಕೊಳ್ತಿಗೆ ಗ್ರಾಮದ ಕುಂಟಿಕಾನದಲ್ಲಿ ಸೆ.29 ರಂದು ನಡೆದಿದೆ.
ಅನ್ಯಕೋಮಿನ ಯುವಕನೋರ್ವನ ಮನೆಯಲ್ಲಿ ಹಿಂದೂ ಯುವತಿಯೊಬ್ಬಳು ತಂಗಿದ್ದಾಳೆ ಎನ್ನುವ ಬಗ್ಗೆ ಮಾಹಿತಿ ದೊರೆತ ಸ್ಥಳೀಯರು ಮನೆ ಬಳಿ ತೆರಳಿ ನೋಡಿದಾಗ ಅಲ್ಲಿ ಯುವತಿ ಇರುವ ಮಾಹಿತಿ ಲಭ್ಯವಾಗಿದೆ.
ವಿಷಯ ತಿಳಿಯುತ್ತಿದಂತೆ ಯುವಕನ ಮನೆಗೆ ಸಾರ್ವಜನಿಕರು ದೌಡಾಯಿಸಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ಏರ್ಪಟ್ಟಿತ್ತು. ಘಟನೆ ಕುರಿತಂತೆ ಬೆಳ್ಳಾರೆ ಪೊಲೀಸರಿಗೆ ಮಾಹಿತಿ ದೊರೆತ ಹಿನ್ನೆಲೆ ಪೊಲೀಸರು ಮನೆಗೆ ಆಗಮಿಸಿದಾಗ ಒಂದು ಗಂಟೆಗಳ ಕಾಲ ಬಾಗಿಲು ತೆಗೆಯದೆ, ನಂತರ ಬಾಗಿಲು ತೆಗೆದಿದ್ದು ಮನೆಯೊಳಗೆ ಹುಡುಕಾಡಿದಾಗ ಯುವತಿ ಮನೆಯಲ್ಲಿ ಕಂಡುಬಂದಿಲ್ಲ. ಈ ಕುರಿತು ಸ್ಥಳೀಯರು ಯುವತಿಯನ್ನು ಬೇರೆಡೆ ಸ್ಥಳಾಂತರಿಸಲಾಗಿದೆ ಎಂದು ಆರೋಪಿಸಿದರು.
ಯುವಕ ದೇಲಂಪಾಡಿ ಕಡೆ ಕೆಲಸಕ್ಕೆ ತೆರಳುತ್ತಿದ್ದು, ಈ ಸಂದರ್ಭದಲ್ಲಿ ಪರಿಚಯವಾದ ಯುವತಿಯನ್ನು ಯಾರೂ ಇಲ್ಲದೆ ವೇಳೆ ತನ್ನ ಮನೆಗೆ ಕರೆ ತಂದಿದ್ದಾನೆ ಎನ್ನಲಾಗಿದೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಸ್ಥಳದಲ್ಲಿದ್ದ ಸಾರ್ವಜನಿಕರ ಗುಂಪನ್ನು ಚದುರಿಸಿ, ಯುವಕನನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.