ಶಿವಮೊಗ್ಗ: ಇಲ್ಲಿನ ತೀರ್ಥಹಳ್ಳಿ ತಾಲ್ಲೂಕಿನ ಸಾಲೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಅರಣ್ಯದಲ್ಲಿ ಸುಟ್ಟ ಕಾರು ಮತ್ತು ಮೃತದೇಹ ಪತ್ತೆಯಾಗಿದೆ. ಕೆಲವು ದಿನಗಳ ಹಿಂದೆ ಕಾರು ಸುಟ್ಟು ಹೋಗಿರುವ ಶಂಕೆ ಇದ್ದು, ಬುಧವಾರ ಪ್ರಕರಣ ಬೆಳಕಿಗೆ ಬಂದಿದೆ.
ಆಗುಂಬೆ ಪೊಲೀಸ್ ಠಾಣೆ ವ್ಯಾಪ್ತಿಯ ಮಿಟ್ಲುಗೋಡು ಎಂಬ ಹಳ್ಳಿಯ ಸನಿಹದ ದಟ್ಟ ಅರಣ್ಯ ಪ್ರದೇಶದಲ್ಲಿ ಕಾರು ಸುಟ್ಟು ಕರಕಲಾಗಿ ಪತ್ತೆಯಾಗಿದೆ. ಕಾರಿನೊಳಗೆ ಮೃತದೇಹ ಸಹ ಸುಟ್ಟ ಸ್ಥಿತಿಯಲ್ಲಿ ಸಿಕ್ಕಿದೆ.
ಕೆಲವು ದಿನಗಳ ಹಿಂದೆ ಈ ಘಟನೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಮಾರುತಿ ಕಂಪನಿಯ ಶಿಫ್ಟ್ ಕಾರಿನ ನಂಬರ್ ಪ್ಲೇಟ್ ಸಹ ಸುಟ್ಟು ಹೋಗಿದ್ದು, ಗುರುತು ಪತ್ತೆ ಸದ್ಯಕ್ಕೆ ಸಾಧ್ಯವಾಗಿಲ್ಲ.
ಕಾರಿನಲ್ಲಿ ಒಬ್ಬ ವ್ಯಕ್ತಿಯ ಕಳೇಬರ ಪೂರ್ಣ ಪ್ರಮಾಣದಲ್ಲಿ ಸುಟ್ಟುಹೋದ ಸ್ಥಿತಿಯಲ್ಲಿ ಕಂಡು ಬಂದಿದೆ. ಮಂಗಳವಾರ ಬೆಳಗ್ಗೆ ಉರುವಲು ತರಲು ಕೆಲವು ಗ್ರಾಮಸ್ಥರು ಕಾಡಿಗೆ ಹೋದಾಗ ಕಾರು ಪತ್ತೆಯಾಗಿದೆ.
ಬೆಂಕಿಗಾಹುತಿಯಾದ ಕಾರು ಮತ್ತು ಸುಟ್ಟ ಶರೀರಿ ನೋಡಿದ ಜನರು ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ. ಆಗುಂಬೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಇದೊಂದು ಆತ್ಮಹತ್ಯೆ ಪ್ರಕರಣವಿರಬಹುದು ಎಂದು ಸಹ ಶಂಕೆ ವ್ಯಕ್ತಪಡಿಸಲಾಗಿದೆ.
ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರ ತಂಡ ಸುಟ್ಟ ಕಾರಿನ ಮತ್ತು ವ್ಯಕ್ತಿಯ ಗುರುತು ಪತ್ತೆ ಹಚ್ಚುವ ಕಾರ್ಯ ಕೈಗೊಂಡಿದ್ದಾರೆ. ಕಾರು ಎಲ್ಲಿಂದ, ಯಾವಾಗ ಈ ಕಾಡಿಗೆ ಬಂತು. ಕಾರು ಸ್ಥಳೀಯರದ್ದೋ ಅಥವಾ ಬೇರೆ ಎಲ್ಲಿಂದಲೂ ಆಗಮಿಸಿದೆಯೇ? ಎಂಬುದು ತನಿಖೆ ಬಳಿಕ ತಿಳಿಯಲಿದೆ.
ಕಾರಿನ ಬಿಡಿ ಭಾಗಗಳು, ಎಂಜಿನ್ ಮುಂತಾದವುಗಳಿಂದ ಕಾರಿನ ಮಾಲೀಕ, ನೋಂದಣಿ ಕುರಿತು ಮಾಹಿತಿ ಸಿಗಬಹುದು. ಕಾರಿನಲ್ಲಿ ಇದ್ದವರು ಯಾರು? ಎಂಬ ದಿಕ್ಕಿನಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.