ಬೆಂಗಳೂರು: ಕೇಂದ್ರದ 3 ಕೃಷಿ ಕಾಯ್ದೆಗಳನ್ನು ವಿರೋಧಿಸಿ ಸೆಪ್ಟೆಂಬರ್ 27ರಂದು ಸಂಯುಕ್ತ ಕಿಸಾನ್ ಮೋರ್ಚಾ ಭಾರತ ಬಂದ್‌ಗೆ ಕರೆ ಕೊಟ್ಟಿದೆ. ದೇಶಾದ್ಯಂತ ಬಂದ್ ಪ್ರಯುಕ್ತ ಪ್ರತಿಭಟನೆಗಳು ನಡೆಯಲಿರುವ ಸರ್ಕಾರ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡಿದೆ.
ಬಂದ್ ಹಿನ್ನೆಲೆಯಲ್ಲಿ ರಾಜ್ಯ ರೈತ ಸಂಘಟಣೆಗಳು ಕರ್ನಾಟಕ ಬಂದ್ ನಡೆಸಲು ಮುಂದಾಗಿದ್ದು ಬಂದ್ ಯಶಸ್ಸಿಗೆ ಎಲ್ಲಾ ಸಂಘಟನೆಗಳ ಬೆಂಬಲ ವ್ಯಕ್ತವಾಗಿದೆ ಎಂದು ರೈತ ಸಂಘದ ಮುಖಂಡ ಬಡಗಲಪುರ ನಾಗೇಂದ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಳೆದ ಹತ್ತು ತಿಂಗಳಿನಿಂದ ರೈತರು ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದರೂ ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ, ದೇಶದ ರೈತ ಸಮುದಾಯ ಭಾರತ್ ಬಂದ್ ಮಾಡುವ ಮೂಲಕ ಮತ್ತೊಂದು ಹೋರಾಟ ನಡೆಸುತ್ತಿದೆ.
ಕಾರ್ಮಿಕ , ದಲಿತ, ಮಹಿಳಾ, ವಿದ್ಯಾರ್ಥಿ ಸಂಘಟನೆಗಳು,ವಿವಿಧ ವಿವಿಧ ಕನ್ನಡಪರ ಸಂಘಟನೆಗಳು ಸೇರಿದಂತೆ ನೂರಾರು ಸಂಘಟನೆಗಳು ಬಂದ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.
ಬಂದ್ ಗೆ ನೈತಿಕ ಬೆಂಬಲ:
ಹೋಟೆಲ್ ಮಾಲೀಕರು, ಖಾಸಗಿ ಬಸ್ ಚಾಲಕರು, ಮಾಲ್ ಗಳು, ಚಿತ್ರ ಮಂದಿರಗಳು, ಖಾಸಗಿ ಶಾಲೆಗಳ ಸಂಘಟನೆಗಳು,ಆಟೋ ಕ್ಯಾಬ್ ಚಾಲಕರು ಬಂದ್‌ಗೆ ನೈತಿಕ ಬೆಂಬಲ ಘೋಷಿಸಿವೆ. ಕೋವಿಡ್ ಸಂಕಷ್ಟದಿಂದ ಈಗಾಗಲೇ ಸಾಕಷ್ಟು ನಷ್ಟ ಅನುಭವಿಸಿದ್ದೇವೆ. ಹಾಗಾಗಿ ಬಂದ್‌ನಲ್ಲಿ ಪಾಲ್ಗೊಳ್ಳದೆ ನೈತಿಕ ಬೆಂಬಲ ಸೂಚಿಸುವುದಾಗಿ ವರ್ತಕರ ಈಗಾಗಲೇ ತಿಳಿಸಿದ್ದಾರೆ.
ಆದರೆ, ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ, ಕಬ್ಬು ಬೆಳೆಗಾರರ ಸಂಘ, ದಲಿತ ಸಂಘಟನೆಗಳು, ಕಾರ್ಮಿಕ ಸಂಘಟನೆಗಳ ಯೂನಿಯನ್, ಗ್ರಾಮೀಣ ಬ್ಯಾಂಕ್ ನೌಕರರ ಸಂಘ , ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣ ಮತ್ತು ಎಪಿಎಂಸಿ ವರ್ತಕರ ಸಂಘ ಸೇರಿದಂತೆ ಕೆಲವು ಸಂಘಗಳು ಮಾತ್ರ ಬಂದ್ ಗೆ ಬೆಂಬಲ ನೀಡಿವೆ. ರಸ್ತೆ ತಡೆ ಮಾಡಿ ಪ್ರತಿಭಟನೆ ಕೈಗೊಳ್ಳಲು ನಿರ್ಧರಿಸಿವೆ ಎನ್ನಲಾಗಿದೆ.
ಈ ನಡುವೆ ಬೆಳಗಾವಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೇಂದ್ರದ ಕೃಷಿ ಕಾಯ್ದೆ ಜಾರಿ ವಿರೋಧಿಸಿ ರೈತ ಸಂಘಟನೆಗಳ ನೇತೃತ್ವದಲ್ಲಿ ನಾಳೆ ಭಾರತ್ ಬಂದ್ ಗೆ ಕರೆ ನೀಡಲಾಗಿದ್ದು, ಪ್ರತಿಭಟನೆ ಹೆಸರಲ್ಲಿ ಜನರಿಗೆ ತೊಂದರೆ ಕೊಡುವುದು ಬೇಡ ಎಂದು ಮನವಿ ಮಾಡಿದ್ದಾರೆ.
ರೈತ ಮುಖಂಡರ ಸಭೆ ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿ ಈಗಷ್ಟೇ ಆರ್ಥಿಕ ಚಟುವಟಿಕೆಗಳು ಆರಂಭವಾಗಿದೆ. ಕೋವಿಡ್ ನಿಂದ ಜನರು, ರೈತರು ಸಮಸ್ಯೆ ಅನುಭವಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಮತ್ತೆ ಬಂದ್ ನಡೆಸಿ ತೊಂದರೆ ಕೊಡುವುದು ಸರಿಯಲ್ಲ. ಧರಣಿ ನಿರತರು ಎಲ್ಲಾ ಚಟುವಟಿಕೆಗಳಿಗೆ ಸಹಕಾರ ಕೊಡಬೇಕು ಎಂದರು.